ಬೆಂಗಳೂರು, ಡಿ.29-ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ವತಿಯಿಂದ ರಾಷ್ಟ್ರಮಟ್ಟದ ಖಾದಿ ಉತ್ಸವವನ್ನು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜ.2 ರಿಂದ 31ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಈ ಬಾರಿ ನಡೆಯಲಿರುವ ಖಾದಿ ಉತ್ಸವಕ್ಕೆ 1.5 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದ್ದು, 50 ಕೋಟಿ ಮೌಲ್ಯದ ಖಾದಿ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ. ಈ ಉತ್ಸವದಲ್ಲಿ ಹೊರರಾಜ್ಯಗಳ 31, ನಮ್ಮ ರಾಜ್ಯದ 46 ಸೇರಿದಂತೆ ಒಟ್ಟು 144 ಮಳಿಗೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು, 225 ಉತ್ಪನ್ನಗಳು ದೊರೆಯಲಿವೆ.
ಪ್ರತಿದಿನ ಸಂಜೆ ನಾಡಿನ ಕಲೆ, ಸಂಸ್ಕøತಿ ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಇದರೊಂದಿಗೆ ಖಾದಿ ಫ್ಯಾಷನ್ ಶೋ ಸಹ ನಡೆಯಲಿದೆ.
ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಂಡಿದ್ದು, ನಿಟ್ ಸಂಸ್ಥೆಯಿಂದ ಖಾದಿ ಬ್ರಾಂಡ್, ಬಿದಿರು-ಬೆತ್ತದ ಉತ್ಪನ್ನ ಜೇನು ಸಾಕಾಣಿಕೆ ಸೇರಿದಂತೆ ಹಲವು ಪ್ರಾತ್ಯಕ್ಷಿಕೆಗಳು ನಡೆಯಲಿವೆ.
2017-18ನೇ ಸಾಲಿನಲ್ಲಿ ಒಟ್ಟು 11 ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಇದನ್ನು 5.85 ಲಕ್ಷ ಗ್ರಾಹಕರು ವೀಕ್ಷಿಸಿದ್ದರು.49 ಕೋಟಿ ಮೌಲ್ಯದ ವಸ್ತುಗಳು ಮಾರಾಟವಾಗಿದ್ದವು ಎಂದು ಮಾಹಿತಿ ನೀಡಿದರು.
ಜ.2 ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಾದಿ ಉತ್ಸವವನ್ನು ಉದ್ಘಾಟಿಸಲಿದ್ದು, ಪ್ರಾತ್ಯಕ್ಷಿಕೆಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೆರೇಗೌಡ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಮಹಂತೇಶ್ ನಿ. ಕರೂರ ಉಪಸ್ಥಿತರಿದ್ದರು.