ಬೆಂಗಳೂರು,ಡಿ.29- ಕರ್ತವ್ಯ ಪರತೆ, ಮಾನವೀಯತೆ, ಸಾಮಾಜಿಕ ಕಳಕಳಿಯುಳ್ಳವರಾಗಿದ್ದ ಖಡಕ್ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಇದೀಗ ನೆನಪು ಮಾತ್ರ..
ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆಯಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎಂದೇ ಮಧುಕರ್ ಶೆಟ್ಟಿ ಜನ ಜನಿತರು.
ಲೋಕಾಯುಕ್ತ ಎಸ್‍ಪಿಯಾಗಿ ನೇಮಕಗೊಂಡ ಎರಡೇ ತಿಂಗಳಲ್ಲೇ ರಾಜಕಾರಣಿಗಳು, ಅಧಿಕಾರಿಗಳನ್ನು ಟ್ರ್ಯಾಪ್ ಮಾಡುವ ಮೂಲಕ ಭ್ರಷ್ಟಾಚಾರಿಗಳನ್ನು ಬಂಧಿಸಿ ಜೈಲಿಗಟ್ಟಿದ ದಿಟ್ಟ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ.
ಗಣಿ ಹಗರಣ, ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಭೂಕಬಳಿಕೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಯಾರ ಮುಲಾಜಿಗೂ ಒಳಗಾಗದೆ ವಿಚಾರಣೆ ನಡೆಸಿ ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಬಿಡದೆ ಬಂಧಿಸಿದ ದಕ್ಷ ಅಧಿಕಾರಿ.
ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಬದ್ಧರಾಗಿದ್ದ ಮಧುಕರ ಶೆಟ್ಟಿಯವರು ಹಗಲು – ರಾತ್ರಿಯೆನ್ನದೇ ದುಡಿಯುತ್ತಿದ್ದ ದಕ್ಷ ಹಾಗೂ ನಿಷ್ಟೂರ ಪೆÇಲೀಸ್ ಅಧಿಕಾರಿ.
ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು.
ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‍ಯು)ದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ನಂತರ ಯಪಿಎಸ್‍ಸಿ ಪರೀಕ್ಷೆ ಬರೆದರು.1999ರಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಹೈದರಾಬಾದ್‍ನ ಐಪಿಎಸ್ ಅಧಿಕಾರಿಗಳ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಬಂದ ನಂತರ ಪ್ರೊಬೇಷನರಿ ಅಧಿಕಾರಿಯಾಗಿ ಚನ್ನಪಟ್ಟಣ ಪೊಲೀಸ್ ಉಪ ವಿಭಾಗದಲ್ಲಿ ಪ್ರಥಮ ಬಾರಿಗೆ ಪೊಲೀಸ್ ಸೇವೆ ಆರಂಭಿಸಿದರು.
ನಂತರ ಎಸ್‍ಪಿಯಾಗಿ ಬಡ್ತಿ ಹೊಂದಿದ ಅವರು ಚಿಕ್ಕಮಗಳೂರು, ಚಾಮರಾಜನಗರ, ಲೋಕಾಯುಕ್ತದಲ್ಲಿ ಹಾಗೂ ಬೆಂಗಳೂರು ನಗರದ ಸಂಚಾರಿ ವಿಭಾಗದ ಡಿಸಿಪಿಯಾಗಿ ಮತ್ತು ಎಎನ್‍ಎಫ್, ಎಸ್‍ಟಿಎಫ್‍ನಲ್ಲೂ ಸೇವೆ ಸಲ್ಲಿಸಿದರು.
ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕ್‍ಗೆ ತೆರಳಿ ಅಲ್ಲಿನ ವಿಶ್ವ ವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದರು.ತದನಂತರ ಮತ್ತೆ ಪೊಲೀಸ್ ಸೇವೆಗೆ ಆಗಮಿಸಿದ ಅವರು, ತರಬೇತಿ ಮತ್ತು ನೇಮಕಾತಿ ವಿಭಾಗದಲ್ಲಿ ಡಿಐಜಿಯಾಗಿ ಸೇವೆ ಸಲ್ಲಿಸಿದರು. ಡಿಐಜಿಯಿಂದ ಐಜಿ ಹುದ್ದೆಗೆ ಬಡ್ತಿ ಪಡೆದ ಅವರು ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಿರ್ದೇಶಕರಾಗಿದ್ದರು.
ಅಲ್ಲಿಂದ ಕೇಂದ್ರ ಸೇವೆಗೆ ತೆರಳಿದ ಮಧುಕರ ಶೆಟ್ಟಿಯವರು ಹೈದರಾಬಾದಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗೂ ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು. ಚಾಮರಾಜನಗರ ಎಸ್‍ಪಿಯಾಗಿದ್ದ ವೇಳೆ ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಲಂಚಕೋರ ಪೊಲೀಸರಿಗೇ ಬಿಸಿ ಮುಟ್ಟಿಸಿದ್ದರು.
ದಕ್ಷ ಅಧಿಕಾರಿಯ ಹೆಜ್ಜೆ ಗುರುತು:
ಈ ಹಿಂದೆ ಚಿಕ್ಕಮಗಳೂರು ಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಡಿಸಿ ಹರ್ಷ ಗುಪ್ತ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು.ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಆ ಹಳ್ಳಿಯ ಹೆಸರನ್ನು ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು.ಈಗಲೂ ಆ ಹಳ್ಳಿಯಲ್ಲಿರುವ ನೂರಾರು ಮಂದಿ ಮಧುಕರ್ ಶೆಟ್ಟಿ ಅವರು ಮಾಡಿದ ಕೆಲಸವನ್ನು ನೆನೆಯುತ್ತಾರೆ.
ನೇರ ನಡೆ, ನಿಷ್ಠುರ ಮಾತಿನ, ಮಾನವೀಯ ಗುಣವುಳ್ಳ ಮಧುಕರ ಶೆಟ್ಟಿಯವರು ಎಂದಿಗೂ ಕರ್ತವ್ಯದ ವಿಚಾರದಲ್ಲಿ ರಾಜೀ ಮಾಡಿಕೊಂಡವರಲ್ಲ.
ಕಾನೂನು ಚೌಕಟ್ಟಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟಿಯವರು ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು.
ತಪ್ಪನ್ನು ಯಾರೇ ಮಾಡಲಿ ಅದನ್ನು ಯಾವ ಮುಲಾಜು ಇಲ್ಲದೇ ಖಂಡಿಸುತ್ತಿದ್ದ ಅವರು, ಹಿರಿಯ ಅಧಿಕಾರಿಗಳಿಗೆ ವಿಧೇಯರಾಗಿ, ಕಿರಿಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು.
ತಂದೆ ವಡ್ಡರ್ಸೆ ರಘುರಾಮ ಶೆಟ್ಟರಂತೆಯೇ ಉತ್ತಮ ಸಮಾಜದ ಕನಸು ಕಂಡಿದ್ದ ಮಧುಕರ ಶೆಟ್ಟಿಯವರ ಅಗಲಿಕೆ ಕರ್ನಾಟಕ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಅಂತೆಯೇ ಇಡೀ ಕರ್ನಾಟಕದ ಜನತೆಯೂ ಮಧುಕರ ಶೆಟ್ಟಿಯವರ ಜನಪರ ಕಾರ್ಯಗಳನ್ನು ನೆನೆಯುತ್ತಿರುವುದು ಅವರ ಜನಪ್ರಿಯತೆಯನ್ನು ಸಾಕ್ಷೀಕರಿಸಿದೆ