ಬೆಂಗಳೂರು,ಡಿ.29-ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ ಹಾಗೂ ಖಾತೆ ಹಂಚಿಕೆಯಿಂದ ಹೈರಾಣಾಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಇದೀಗ ಕರ್ನಾಟಕ ಲೋಕಸಭಾ ಆಯೋಗ (ಕೆಪಿಎಸ್ಸಿ )ದ ಅಧ್ಯಕ್ಷ ಸ್ಥಾನಕ್ಕೆ ಭಾರೀ ಜಟಾಪಟಿ ಆರಂಭವಾಗಿದೆ.
ಕೆಪಿಎಸ್ಸಿಯ ಹಾಲಿ ಅಧ್ಯಕ್ಷರಾಗಿದ್ದ ಶಾಮ್ಭಟ್ ಕಳೆದ 7ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ತೆರವಾಗಿರುವ ಈ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ಹಿರಿಯ ಸದಸ್ಯ ರಘುನಂದನ್ ರಾಮಣ್ಣ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅತ್ಯಂತ ಪ್ರತಿಷ್ಠೆಯ ಹುದ್ದೆಯಾಗಿರುವ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮವರನ್ನೇ ಆಯ್ಕೆ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪರಮಾಪ್ತ ಕರಿಗೌಡ ಅವರನ್ನು ನೇಮಕ ಮಾಡಲು ಕುಮಾರಸ್ವಾಮಿ ಒಲವು ತೋರಿದ್ದಾರೆ.
ಆದರೆ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಅಪ್ತರಾದ ಹಾಗೂ ಹಾಲಿ ಸದಸ್ಯರೂ ಆಗಿರುವ ರಘುನಂದನ್ ರಾಮಣ್ಣ ಅವರನ್ನೇ ಮುಂದುವರೆಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಕುಮಾರಸ್ವಾಮಿ ಹಾಗೂ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಯಾರ ಕೈ ಮೇಲಾಗಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.
ಇದರ ಜೊತೆ ಕೆಪಿಎಸ್ಸಿಯ ಎರಡು ಸದಸ್ಯರ ಸ್ಥಾನವೂ ತೆರವಾಗಿದ್ದು, ಈಗಾಗಲೇ ಜೆಡಿಎಸ್ ಒಂದು ಸ್ಥಾನಕ್ಕೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ನೇಮಿಸಲು ಮುಂದಾಗಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ಒಪ್ಪಿಲ್ಲ.
ಕರೀಗೌಡ ಬೇಡ: ಕೆಪಿಎಸ್ಸಿಯಂತಹ ಪ್ರಮುಖ ಹುದ್ದೆಗೆ ಕರೀಗೌಡರನ್ನು ನೇಮಕ ಮಾಡಬಾರದೆಂಬ ಡಿ.ಕೆ.ಶಿವಕುಮಾರ್ ಅವರ ಬೇಡಿಕೆಗೆ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿದೆ.
ಕರೀಗೌಡರ ಮೇಲೆ ಅತ್ಯಂತ ಗುರುತರವಾದ ಆರೋಪಗಳಿವೆ. ಅಂಥವರನ್ನು ತಂದು ಕೂರಿಸಿದರೆ ಆಯೋಗಕ್ಕೆ ಕೆಟ್ಟ ಹೆಸರು ಬರುತ್ತದೆ.ಈ ಹಿಂದೆ ಶಾಮ್ಭಟ್ ಅವರನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇಮಕ ಮಾಡಿದಾಗ ಸಾರ್ವಜನಿಕ ವಲಯದಲ್ಲಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.
ಇದೀಗ ಮತ್ತೆ ಅಂಥದ್ದೇ ತಪ್ಪು ಮಾಡಿದರೆ ಪಕ್ಷಕ್ಕೆ ಕಳಂಕ ಬರುತ್ತದೆ.1998ನೇ ಸಾಲಿನ ಪ್ರೊಬೆಷನರಿ ನೇಮಕಾತಿಯಲ್ಲಿ ಕರೀಗೌಡರು ಅಕ್ರಮ ನಡೆಸಿ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದರು.ಅವರು ನಡೆಸಿರುವ ಅಕ್ರಮವನ್ನು ಸತ್ಯ ಶೋಧನ ಸಮಿತಿ ಕೂಡ ವರದಿಯಲ್ಲಿ ಉಲ್ಲೇಖ ಮಾಡಿದೆ.
ಇಂಥವರನ್ನು ಅಂತಹ ಪ್ರಮುಖ ಹುದ್ದೆಗೆ ತಂದರೆ ಪಾರದರ್ಶಕವಾಗಿ ಕೆಪಿಎಸ್ಸಿ ನಡೆಯಲು ಸಾಧ್ಯವೆ ಎಂಬ ಮೂಲಭೂತ ಪ್ರಶ್ನೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ.
ಅಲ್ಲದೆ ಕೆಪಿಎಸ್ಸಿ ಮೂಲಕ ಪ್ರತಿವರ್ಷ ಸಾವಿರಾರು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹೇಳಿಕೇಳಿ ಕರೀಗೌಡರು ಗೌಡರ ಕುಟುಂಬದ ಆಪ್ತರು. ಅಲ್ಲಿ ನಡೆಯುವ ಪ್ರತಿ ಬೆಳವಣಿಗೆಯು ಕುಮಾರಸ್ವಾಮಿಗೆ ತಲುಪುತ್ತದೆ.ಬದಲಿಗೆ ರಘನಂದನ್ ರಾಮಣ್ಣನವರನ್ನೇ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಕಾಂಗ್ರೆಸ್ ಪಟ್ಟು ಹಿಡಿದಿದೆ.
ಡಿಕೆಶಿ ಪಟ್ಟು:
ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಎಂದೇ ಕರೆಯುವ ಡಿ.ಕೆ.ಶಿವಕುಮಾರ್ ಅವರು ಕೆಪಿಎಸ್ಸಿ ಹಾಲಿ ಅಧ್ಯಕ್ಷ ರಘುನಂದನ್ ರಾಮಣ್ಣ ಅವರನ್ನೇ ಮುಂದುವರೆಸುವಂತೆ ಪಕ್ಷದ ಮೇಲೆ ಒತ್ತಡ ಹಾಕಿದ್ದಾರೆ.
ರಘುನಂದನ್ ರಾಮಣ್ಣನವರ ತಂದೆ ಮೂಲತಃ ಕಾಂಗ್ರೆಸಿಗರು. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರಿಗೆ ದಶಕಗಳಿಂದ ಪರಮಾಪ್ತರು. ಹಿಂದೆ ಸರ್ಕಾರದ ಅವಧಿಯಲ್ಲಿ ಕೆಪಿಎಸ್ಸಿಗೆ ಸದಸ್ಯರನ್ನಾಗಿ ನೇಮಕ ಮಾಡುವಲ್ಲೂ ಇವರ ಪ್ರಭಾವವೇ ಕೆಲಸ ಮಾಡಿತ್ತು.
ಇದೀಗ ಶಾಮ್ಭಟ್ ಸ್ಥಾನಕ್ಕೆ ರಘುನಂದನ್ ರಾಮಣ್ಣನವರನ್ನೇ ನೇಮಕ ಮಾಡಲು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರದ ನೊಗ ಹೊತ್ತಿರುವ ಕುಮಾರಸ್ವಾಮಿ ಹಿಂದೆ ಸರಿಯುವರೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಕೆಪಿಎಸ್ಸಿ ಅಧ್ಯಕ್ಷ ಸ್ಥಾನ ಅಧಿಕಾರಾವಧಿ ಆರು ವರ್ಷ ಇಲ್ಲವೇ 62ನೇ ವರ್ಷಕ್ಕೆ ಸೇವೆಯಿಂದ ನಿವೃತ್ತಿ ಹೊಂದುತ್ತಾರೆ.ಸರ್ಕಾರ ಒಂದು ಬಾರಿ ನೇಮಕ ಮಾಡಿ ರಾಜ್ಯಪಾಲ್ಯರ ಅಂಕಿತಕ್ಕೆ ಕಳುಹಿಸಿಕೊಟ್ಟರೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ.
ಒಂದು ವೇಳೆ ಕೆಪಿಎಸ್ಸಿ ಅಧ್ಯಕ್ಷರ ಮೇಲೆ ಯಾವುದಾದರೂ ಗುರುತರವಾದ ಭ್ರಷ್ಟಾಚಾರದ ಆರೋಪಗಳು ಕೇಳಿಬಂದರೆ ವಿಧಾನ ಮಂಡಲದ ಉಭಯ ಸದನಗಳಲ್ಲಿ 3/2ರಷ್ಟು ಬಹುಮತದ ಮೇಲೆ ಮಹಾಭಿಯೋಗ ಜಾರಿ ಮಾಡಬೇಕಾಗುತ್ತದೆ.
3/2ರಷ್ಟು ಬಹುಮತ ಬಂದರೆ ಅದನ್ನು ರಾಷ್ಟ್ರಪತಿಗೆ ಕಳುಹಿಸಿಕೊಟ್ಟು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೋರಬಹುದು. ಅದನ್ನು ಹೊರತುಪಡಿಸಿದರೆ, ರಾಜ್ಯ ಸರ್ಕಾರಕ್ಕಾಗಲಿ ಅಥವಾ ರಾಜ್ಯಪಾಲರಿಗಾಗಲಿ ಅವರ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡಲು ಅಧಿಕಾರವಿರುವುದಿಲ್ಲ.
ಕೆಪಿಎಸ್ಸಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಅಧ್ಯಕ್ಷರು ಸೇರಿದಂತೆ ಒಟ್ಟು 13 ಮಂದಿ ಸದಸ್ಯರಿರುತ್ತಾರೆ. ಇದೇ ತಿಂಗಳು 7ರಂದು ಶ್ಯಾಮ್ಭಟ್ ಜೊತೆಗೆ ಇಬ್ಬರು ಸದಸ್ಯರು ಕೂಡ ನಿವೃತ್ತಿಯಾಗಿದ್ದಾರೆ.
ತೆರವಾಗಿರುವ ಎರಡು ಸ್ಥಾನದಲ್ಲಿ ಜೆಡಿಎಸ್, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ನೇಮಕ ಮಾಡಲು ಮುಂದಾಗಿದೆ. ಆದರೆ ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.