ನಿಗಮ ಮಂಡಳಿಗಳ ಅಧ್ಯಕ್ಷ ನೇಮಕಾತಿ ನಡೆಯುವುದು ಅನುಮಾನ

ಬೆಂಗಳೂರು, ಡಿ.29-ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಲೋಕಸಭೆ ಚುನಾವಣೆವರೆಗೆ ನಡೆಯುವುದು ಅನುಮಾನ. ಪ್ರಸ್ತುತ ಕಾಂಗ್ರೆಸ್ ಪ್ರಕಟಿಸಿರುವ ಪಟ್ಟಿಗೆ ಜೆಡಿಎಸ್‍ನಿಂದ ತೀವ್ರ ಆಕ್ಷೇಪ ಕೂಡ ವ್ಯಕ್ತವಾಗಿದೆ.

ಪಟ್ಟಿಯನ್ನು ಪುನರ್ ಪರಿಶೀಲಿಸುವಂತೆ ಜೆಡಿಎಸ್ ನಾಯಕರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಗೆ ಸದ್ಯ ಮುಕ್ತಿ ದೊರೆಯುವಂತೆ ಕಾಣುತ್ತಿಲ್ಲ. ಲೋಕಸಭೆ ಚುನಾವಣೆಯವರೆಗೂ ಮುಂದೂಡಿಕೆಯಾದರೂ ಆಶ್ಚರ್ಯವಿಲ್ಲ.

30 ಶಾಸಕರಿಗೆ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಹುದ್ದೆ ನೀಡಬೇಕೆಂದು ಸಮನ್ವಯ ಸಮಿತಿಯಲ್ಲಿ ತೀರ್ಮಾನವಾಗಿತ್ತು.20 ಕಾಂಗ್ರೆಸ್, 10 ಜೆಡಿಎಸ್ ನವರಿಗೆ ಕೊಡಬೇಕೆಂದು ನಿರ್ಧರಿಸಲಾಗಿದ್ದು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಕಾಂಗ್ರೆಸ್‍ನವರು ನಿಗಮ ಮಂಡಳಿ, ಸಂಸದೀಯ ಕಾರ್ಯದರ್ಶಿ, ರಾಜಕೀಯ ಕಾರ್ಯದರ್ಶಿ, ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಗಳನ್ನು ಪ್ರಕಟಿಸಿದರು.

ಸಂಪುಟ ವಿಸ್ತರಣೆ, ಪುನಾರಚನೆಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅವರ ಖಾತೆಗಳಿಗೆ ಕಾಂಗ್ರೆಸ್‍ನವರು ಕೈ ಹಾಕಲಿಲ್ಲ. ನಿಗಮ ಮಂಡಳಿ ವಿಷಯದಲ್ಲಿ ಜೆಡಿಎಸ್‍ನವರ ಜೊತೆ ಚರ್ಚೆ ಮಾಡದೆ ಏಕಾಏಕಿ ಫಲವತ್ತಾದ ನಿಗಮಗಳಿಗೆ ಕಾಂಗ್ರೆಸ್ ಶಾಸಕರನ್ನು ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂತು. ಅಲ್ಲದೆ, ಜೆಡಿಎಸ್ ಸಚಿವರಾಗಿರುವ ಇಲಾಖಾ ವ್ಯಾಪ್ತಿಯ ಅಂದರೆ ಸಾರಿಗೆ, ರೇಷ್ಮೆ, ಲೋಕೋಪಯೋಗಿ ಇಲಾಖೆ ನಿಗಮಗಳಿಗೆ ಕಾಂಗ್ರೆಸ್ ಶಾಸಕರನ್ನು ನೇಮಿಸಿರುವುದು ಕೆಂಗಣ್ಣಿಗೆ ಗುರಿಯಾಯಿತು.

ಇದಲ್ಲದೆ, ಮುಖ್ಯಮಂತ್ರಿಗಳನ್ನೂ ಕೇಳದೆ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಶಾಸಕರಾದ ಮುನಿಯಪ್ಪ ಅವರನ್ನು ನೇಮಕ ಮಾಡಿದ್ದು, ಸಹಜವಾಗಿ ಕುಮಾರಸ್ವಾಮಿಯವರಿಗೆ ಬೇಸರ ತರಿಸಿತ್ತು. ಹೀಗಾಗಿ ಆ ಪಟ್ಟಿಯನ್ನು ತಡೆಹಿಡಿಯಬೇಕೆಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದರು.

ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಚರ್ಚೆ ನಡೆಸಿದರು.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿಗಮ ಮಂಡಳಿಗಳ ನೇಮಕಾತಿಗೆ ನಿನ್ನೆ ಸಂಜೆಯೇ ಕುಮಾರಸ್ವಾಮಿಯವರು ಸಹಿ ಹಾಕಬೇಕಿತ್ತು.ಆದರೆ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸಿಂಗಾಪುರಕ್ಕೆ ತೆರಳಿದ್ದು, ಜ.2 ರಂದು ಹಿಂದಿರುಗಲಿದ್ದಾರೆ.

ನಿಗಮ ಮಂಡಳಿಗಳ ಹಲವರನ್ನು ಬದಲಿಸಬೇಕೆಂಬ ಮಾತುಗಳು ಕೇಳಿ ಬಂದಿವೆ. ಜನವರಿ ತಿಂಗಳ ಅಂತ್ಯದಲ್ಲಿ ನೇಮಕಾತಿ ಪ್ರಕ್ರಿಯೆ ಅಂತ್ಯಗೊಳ್ಳಬೇಕು.ಇಲ್ಲದಿದ್ದರೆ ಫೆಬ್ರವರಿಯಲ್ಲಿ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಹಾಗಾಗಿ ನಿಗಮ ಮಂಡಳಿಗಳ ನೇಮಕ ಮಹಾಚುನಾವಣೆವರೆಗೂ ಮುಂದೂಡಿಕೆಯಾಗಲಿದೆ ಎಂದು ಹೇಳಲಾಗಿದೆ.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ನಿಗಮ ಮಂಡಳಿಗಳ ಸಂಬಂಧ ಬಹಿರಂಗವಾಗಿಯೇ ಆರೋಪ ಮಾಡಿದ್ದರು. ರಸ್ತೆ ಸಾರಿಗೆ ನಿಗಮಕ್ಕೆ ಕಾಂಗ್ರೆಸ್ ಶಾಸಕರನ್ನು ನೇಮಕ ಮಾಡಲು ಮುಂದಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಒಪ್ಪಿಗೆಯಿಲ್ಲದೆ ಹೇಗೆ ನೇಮಕ ಮಾಡುತ್ತಾರೆ ಎಂದು ಪ್ರಶ್ನಿಸಿದ್ದರು.

ಇದೇ ರೀತಿ ರೇಷ್ಮೆ ನಿಗಮಕ್ಕೂ ಕಾಂಗ್ರೆಸ್ ಶಾಸಕರನ್ನು ನೇಮಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಈ ನಡುವೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ತೀರ್ಮಾನ ಮಾಡುತ್ತೇವೆ. ಎಲ್ಲವೂ ಸುಗಮವಾಗಿ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನು ಗಮನಿಸಿದರೆ ಪ್ರಸ್ತುತ ಫೈನಲ್ ಆಗಿರುವ ಪಟ್ಟಿಗೆ ಮುಕ್ತಿ ದೊರೆಯುವ ಸಾಧ್ಯತೆ ಇಲ್ಲ. ಮತ್ತೊಮ್ಮೆ ಎರಡೂ ಪಕ್ಷಗಳ ಮುಖಂಡರು ಪರಸ್ಪರ ಚರ್ಚಿಸಿ ಮತ್ತೊಂದು ಪಟ್ಟಿ ತಯಾರಿಸುವ ಸಾಧ್ಯತೆ ಇದೆ.

ಆ ಪ್ರಕ್ರಿಯೆ ಸದ್ಯಕ್ಕೆ ನಡೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದು ಲೋಕಸಭೆ ಚುನಾವಣೆವರೆಗೂ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ