ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿದ್ದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಇನ್ನಿಲ್ಲ, ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಹೈದರಾಬಾದ್:  ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಐಪಿಎಸ್ ಯುವ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ. ತೀವ್ರ ಅನಾರೋಗ್ಯದಿಂದ ಹೈದರಾಬಾದ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಮೂಲದ ಮಧುಕರ ಶೆಟ್ಟಿ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ಅಂತಿಮ ದರ್ಶನಕ್ಕೆ ಹೈದರಾಬಾದ್​ನ ನಿವಾಸದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮಧುಕರ್ ಶೆಟ್ಟಿ ಅವರು, ಹೆಚ್​1ಎನ್​1 ಸೋಂಕು ತಗುಲಿ ಅನಾರೋಗ್ಯಕ್ಕೊಳಗಾಗಿದ್ದರು. ನಿನ್ನೆ ರಾತ್ರಿಯಿಂದ ಹೈದರಾಬಾದ್​ನ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೈದರಾಬಾದ್  ಪೊಲೀಸ್ ಆಕಾಡೆಮಿ ಆಧಿಕಾರಿಗಳು, ತರಬೇತಿ ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇಂದು ಹೈದರಾಬಾದ್​ನಿಂದ ಬೆಂಗಳೂರಿಗೆ ಅಧಿಕಾರಿಗಳು ಪಾರ್ಥಿವ ಶರೀರವನ್ನು ತರಲಿದ್ದಾರೆ. ಇದಕ್ಕಾಗಿ ಈಗಾಗಲೇ ಇಬ್ಬರು ಐಪಿಎಸ್​ ಅಧಿಕಾರಿಗಳಾದ ಎಡಿಜಿಪಿ ಪ್ರತಾಪ್​ ರೆಡ್ಡಿ ಮತ್ತು ಕಲಬುರ್ಗಿ ಎಸ್​ಪಿ ಶಶಿಕುಮಾರ್ ಹೈದರಾಬಾದ್​ಗೆ ತೆರಳಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುವುದು.

ಯಲಹಂಕ ಬಳಿಯ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ, ಶ್ರದ್ಧಾಂಜಲಿ ವಾಹನದ ಮೂಲಕ‌ ಮಧುಕರ್ ಶೆಟ್ಟಿಯವರ ಹುಟ್ಟೂರಿಗೆ ಪಾರ್ಥಿವ ಶರೀರವನ್ನು ಕರೆದೊಯ್ಯಲಾಗುವುದು. ರಾತ್ರಿ 11 ಗಂಟೆಗೆ ಮಧುಕರ ಶೆಟ್ಟಿ ಅವರ  ಹುಟ್ಟೂರಾದ ಕುಂದಾಪುರದ ಯಡಾಡಿಗೆ ಪಾರ್ಥಿವ ಶರೀರ ತಲುಪಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.

ಸದ್ಯ ಮಧುಕರ್ ಶೆಟ್ಟಿಗೆ ಒಬ್ಬಳು ಪುತ್ರಿ ಮತ್ತು ಪತ್ನಿಯನ್ನ ಅಗಲಿದ್ದಾರೆ. ಮಧುಕರ್ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಮಧುಕರ ಶೆಟ್ಟಿ:
ಉಡುಪಿಯ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮಗನಾದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಪ್ರಸ್ತುತ ಹೈದರಾಬಾದ್​ನಲ್ಲಿ ನೆಲೆಸಿದ್ದರು.  ಹೆಚ್​1ಎನ್​1 ಸೋಂಕು ತಗುಲಿ ಅಂಗಾಂಗಳನ್ನು ಹಾನಿಗೊಳಿಸಿದ್ದರಿಂದ ಹೈದರಾಬಾದ್​ನ ಕಾಂಟಿನೆಂಟಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಈ ವೇಳೆ  ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು. ಮಧುಕರ್ ಶೆಟ್ಟಿ ಹೃದಯದಲ್ಲಿನ ಮಹಾಪಧಮನಿಯ ಕುಗ್ಗುವಿಕೆಯಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ ವೈದ್ಯರ ತಂಡ ಮಧುಕರ್ ಶೆಟ್ಟಿಯವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಮಧುಕರ್ ಶೆಟ್ಟಿಯವರು ಆರೋಗ್ಯದಲ್ಲಿ ಏರುಪೇರು ಕಂಡುಬಂದಿತು . ಈ ವೇಳೆ ಇಕ್ಮೊ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಸಾಧನಗಳನ್ನು ಮಧುಕರ್ ಶೆಟ್ಟಿಗೆ ಅಳವಡಿಸಲಾಗಿತ್ತು. ದುರದೃಷ್ಟವಶಾತ್ ಮಧುಕರ್ ಯಾವುದೇ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ