ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸಾವು ಕುರಿತು ವರದಿ ಆಧರಿಸಿ ಸಂಶಯವಿದ್ದರೆ ತನಿಖೆಗೆ ಆದೇಶ, ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು,ಡಿ.29- ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸಾವು ಕುರಿತು ವರದಿಯನ್ನು ಆಧರಿಸಿ ಸಂಶಯವಿದ್ದರೆ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಧುಕರ ಶೆಟ್ಟಿ ಸಾವಿನ ಬಗ್ಗೆ ತನಿಖೆ ನಡೆಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯಿಂದ ವರದಿ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಬಗ್ಗೆ ನಮ್ಮ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.ಅವರ ಸಾವು ಸಹಜವಾಗಿದೆಯೇ ಅಥವಾ ಅಸಹಜವೇ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಹೈದರಾಬಾದ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರು ಎಚ್1ಎನ್1 ಖಾಯಿಲೆಯಿಂದ ಬಳಲುತ್ತಿದ್ದು, ಶ್ವಾಸಕೋಶದ ಸಮಸ್ಯೆಯಿಂದ ನಿನ್ನೆ ನಿಧನರಾಗಿದ್ದರು.

ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು. ಆಸ್ಪತ್ರೆಯಿಂದ ವರದಿ ತರಿಸಿಕೊಂಡು ಸಂಶಯವಿದ್ದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ತಿಳಿಸಿದರು.

ಸಚಿವ ಡಿ.ಕೆ.ಶಿವಕುಮಾರ್ ಅವರೂ ಕೂಡ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಲೋಕಾಯುಕ್ತದಲ್ಲಿ ಸೇವೆಯಲ್ಲಿದ್ದಾಗ ಕೆಲವು ರಾಜಕಾರಣಿಗಳು, ಅಧಿಕಾರಿಗಳನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದ ಮಧುಕರ ಶೆಟ್ಟಿಯವರ ಅಕಾಲಿಕ ಮರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಈ ಬಗ್ಗೆ ತನಿಖೆ ನಡೆಸಲು ಕೂಡ ಸರ್ಕಾರ ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ