ನವದೆಹಲಿ: ಶೆಲ್ಟರ್ ಹೋಂನಲ್ಲಿ ಆಶ್ರಯ ಪಡೆಯುತ್ತಿದ್ದ ಹೆಣ್ಣು ಮಕ್ಕಳಿಗೆ ಅಲ್ಲಿನ ಸಿಬ್ಬಂದಿಯಿಂದಲೇ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ಈ ಕುರಿತು ಮಾಹಿತಿ ನೀಡಿದ್ದು, ಶೆಲ್ಟರ್ ಹೋಂ ತಪಾಸಣೆಗೆ ತೆರಳಿದ್ದಾಗ ಈ ಭೀಕರ ಕೃತ್ಯ ತಿಳಿದು ಬಂದಿದೆ. 6ರಿಂದ 15 ವರ್ಷದ ಮಕ್ಕಳನ್ನು ಡಿಸಿಡಬ್ಲ್ಯೂ ಸದಸ್ಯರು ಸಮಾಲೋಚನೆ ನಡೆಸಿದಾಗ ಶೆಲ್ಟರ್ ಹೋಂನಲ್ಲಿನ ತಮ್ಮ ಕಹಿ ಅನುಭವ ಹಂಚಿಕೊಂಡು, ಕಿರುಕುಳದ ಬಗ್ಗೆ ವಿವರಿಸಿದ್ದಾರೆ.
ದೆಹಲಿಯ ದ್ವಾರಕ ಎಂಬಲ್ಲಿರುವ ಈ ನಿರಾಶ್ರಿತರ ಆಶ್ರಯ ಮನೆಯಲ್ಲಿ ಅಲ್ಲಿನ ಮಹಿಳಾ ಸಿಬ್ಬಂದಿ, ಹೆಣ್ಣು ಮಕ್ಕಳಿಗೆ ಶಿಕ್ಷೆಯಾಗಿ ಅವರ ಖಾಸಗಿ ಭಾಗಕ್ಕೆ ಖಾರದ ಪುಡಿ ಎರಚುತ್ತಿದ್ದರು. ಅಷ್ಟೇ ಅಲ್ಲದೆ ಖಾರದ ಪುಡಿ ತಿನ್ನಿಸುತ್ತಿದ್ದರು ಎಂದು ಅಲ್ಲಿನ ಕೆಲ ಹೆಣ್ಣು ಮಕ್ಕಳು ಆರೋಪಿಸಿದ್ದಾರೆ.
ಸಿಬ್ಬಂದಿ ನಡೆಗೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಕಠಿಣ ಮತ್ತು ಭಯಾನಕ ಶಿಕ್ಷೆಗೆ ಒಳಗಾಗುತ್ತಿದ್ದರು. ಶೆಲ್ಟರ್ ಹೋಂನಲ್ಲಿ ಸಿಬ್ಬಂದಿ ಕೊರತೆ ಇದ್ದರಿಂದ 13 ವರ್ಷಕ್ಕೂ ಮೇಲ್ಪಟ್ಟ ಹೆಣ್ಣು ಮಕ್ಕಳಿಂದ ಶೌಚಾಲಯ, ಪಾತ್ರೆ, ಕೊಠಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿದ್ದರು.
ಶೆಲ್ಟರ್ ಹೋಂನಲ್ಲಿ 22 ಹೆಣ್ಣು ಮಕ್ಕಳು ವಾಸವಿದ್ದರು. ಜತೆಗೆ ಒಬ್ಬರು ಅಡುಗೆ ಮಾಡುವವರು ಮತ್ತು ಸಿಬ್ಬಂದಿ ನೆಲೆಸಿದ್ದರು ಎಂದು ಡಿಸಿಡಬ್ಲ್ಯೂ ತಿಳಿಸಿದೆ. ಈ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ನ್ಯಾಯ ಕಾಯ್ದೆಯಡಿ ಆಶ್ರಯ ತಾಣದ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
Delhi Shelter Home, Abused,Young Girls, Punished with Chilli Powder,Private Parts