ವಿಶ್ವೆ ಒಂದು ಕುಟುಂಬ ಮತ್ತು ಎಲ್ಲರೂ ಒಂದೇ ಎಂಬ ಕುವೆಂಪು ಅವರ ಮಾತಿನಂತೆ ಬಾಳ್ವೆ ನಡೆಸಿದರೆ ಸಂಘರ್ಷವೇ ಇರುವುದಿಲ್ಲ

ಬೆಂಗಳೂರು, ಡಿ.29- ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವವೆ ಒಂದು ಕುಟುಂಬ, ನಾವೆಲ್ಲರೂ ಒಂದೇ ಎಂಬ ಉದಾತ್ತ ಭಾವನೆಯಿಂದ ಬಾಳ್ವೆ ನಡೆಸಿದರೆ ಜಗತ್ತಿನಲ್ಲಿ ಸಂಘರ್ಷವೇ ಏರ್ಪಡುವುದಿಲ್ಲ ಎಂದು ಶಾಸಕ ರವಿಸುಬ್ರಮಣ್ಯ ಅಭಿಪ್ರಾಯಪಟ್ಟರು.

ಹನುಮಂತನಗರ ವಾರ್ಡ್‍ನ ಸರ್ಕಾರಿ ಶಾಲೆಯಲ್ಲಿ ಸಮರ ಸೇನೆ ಆಯೋಜಿಸಿದ್ದ ಕುವೆಂಪುಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರ ತತ್ವ, ಆದರ್ಶ, ಸಂದೇಶಗಳು ಸಾರ್ವಕಾಲಿಕವಾಗಿದ್ದು, ವಿಶ್ವಶಾಂತಿ ಪೂರಕವಾಗಿವೆ ಎಂದರು.

ಸಮರಸೇನೆ ಸಂಘಟನೆ ರಾಜ್ಯಾಧ್ಯಕ್ಷ ಬಿ.ಆರ್.ಕಾಂತರಾಜ್‍ಗೌಡ ಮಾತನಾಡಿ, ಮಹಾಕವಿಯ ವಿಶ್ವಮಾನವ ಸಂದೇಶ ಜಗತ್ತಿನ ಜಾತಿ, ಧರ್ಮ ವರ್ಣದ ಸಂಕುಚಿತ ಮನೋಭಾವವನ್ನು ತೊಡೆದು ಹಾಕಿ ಸಹಬಾಳ್ವೆ, ಸಾಮರಸ್ಯ ಮೂಡಿಸುವ ಪ್ರೇರಕ ಶಕ್ತಿಯಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಮೂಲಕ ಮಹಾನ್ ಚೇತನ ಕುವೆಂಪು ಅವರಿಗೆ ಗೌರವ ಸಲ್ಲಿಸೋಣ ಎಂದು ಹೇಳಿದರು.

ವಿಶ್ವಕವಿಯಾಗಿದ್ದರೂ ತನ್ನತನ ಬಿಡದೆ ನಾಡು, ನುಡಿಯ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿದ್ದ ಮಹಾಕವಿಯ ಸಂದೇಶವನ್ನು ನಾವೆಲ್ಲರೂ ಅಳವಡಿಸಿ ಕೊಳ್ಳಬೇಕಿದೆ ಎಂದರು.

ವಿದ್ಯಾರ್ಥಿಗಳು ಕುವೆಂಪು ರಚಿತ ಗೀತೆಗಳನ್ನು ಹಾಡಿದರು. ಭರತನಾಟ್ಯ, ಸುಗಮ ಸಂಗೀತ, ಕುವೆಂಪುರವರ ಕಲಾಚಿತ್ರ ರಚನೆ, ಜತೆಗೆ ಪ್ರತಿಭಾ ಪುರಸ್ಕಾರವನ್ನು ಇದೇ ವೇಳೆ ಹಮ್ಮಿಕೊಳ್ಳಲಾಗಿತು.

ಮುಖ್ಯೋಪಾಧ್ಯಾಯರಾದ ವಿಜಯ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಜೇಶ್ ಸದಸ್ಯ ನಾಗರಾಜ್, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ