ಬೆಂಗಳೂರು, ಡಿ.29- ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಸಂಸ್ಥೆಗಳಿಗೂ ಭದ್ರತೆ ಅವಶ್ಯಕತೆ ಇದೆ.ಇದರಿಂದ ಸಮಾಜದಲ್ಲಾಗುವ ತೊಂದರೆಗಳನ್ನು ತಪ್ಪಿಸಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಇಂದಿಲ್ಲಿ ಅಭಿಪ್ರಾಯಪಟ್ಟರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2019ರ ಕ್ಯಾಲೆಂಡರ್ ಮತ್ತು 70ನೆ ವರ್ಷದ ವಿಶೇಷ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಭದ್ರತೆಗೆ ಪ್ರತಿಯೊಬ್ಬರೂ ಸಹಕರಿಸಬೇಕು.ಆಗ ಹೆಚ್ಚಿನ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದರು.
ನ್ಯಾಯಾಂಗದಲ್ಲಿ ಪ್ರಾಮಾಣಿಕತೆ, ದಕ್ಷತೆ, ನಿಯತ್ತು, ನಿಷ್ಠೆ ಇದ್ದಂತೆ ಪತ್ರಿಕಾ ಮಾಧ್ಯಮದಲ್ಲೂ ಅಪ್ರಾಮಾಣಿಕತೆ ದೂರ ಮಾಡಿ ಕಾರ್ಯನಿರ್ವಹಿಸುವ ಆವಶ್ಯಕತೆ ಇದೆ.ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು.ಅದರಲ್ಲೂ ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರ ಬೆಂಬಲ ಅಗತ್ಯ.ಕೇವಲ ಒಂದು ಸಂಘ ಅಥವಾ ಸಂಸ್ಥೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಸಹಕಾರಿ ಆಂದೋಲನ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಇದರಿಂದ ಏಳಿಗೆಯೂ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 69 ವರ್ಷಗಳಿಂದ ಸಂಘ ಹಂತ ಹಂತವಾಗಿ ಬೆಳೆದು ಬಂದಿದೆ.ಇನ್ನಷ್ಟು ದೊಡ್ಡದಾಗಿ ಬೆಳೆಯಲಿ ಎಂದು ಹಾರೈಸಿದರು.ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಮಾಧ್ಯಮಗಳು ನೀಡಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಎಂ.ಎಸ್.ರಾಘವೇಂದ್ರ, ಉಪಾಧ್ಯಕ್ಷ ಲಕ್ಷ್ಮಿನಾರಾಯಣ್, ಖಜಾಂಚಿ ಯತಿರಾಜ್, ಕಾರ್ಯದರ್ಶಿ ನಾಗರಾಜಸ್ವಾಮಿ, ನಿರ್ದೇಶಕರಾದ ಕೆ.ರಾಘವೇಂದ್ರ, ಶಿವಣ್ಣ, ಸಚ್ಚಿದಾನಂದ, ಸುಮನಾ ಲಕ್ಷ್ಮೀಶ, ಮುಂಜಾನೆ ಸತ್ಯ, ವನಿತಾ ಮತ್ತಿತರರಿದ್ದರು.