ಬೆಂಗಳೂರು, ಡಿ.29-ಮರಳು ನೀತಿ ಸರಳೀಕರಣಕ್ಕೆ ಅಧ್ಯಯನ ಕೈಗೊಂಡಿರುವ ಅಧಿಕಾರಿಗಳ ತಂಡ ನೀಡುವ ವರದಿ ಆಧರಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರಾಜ್ಯದಲ್ಲಿ ಮರಳಿಗೆ ಇಂತಹ ಸಮಸ್ಯೆ ಇರಲಿಲ್ಲ. ಇತ್ತೀಚೆಗೆ ಈ ಸಮಸ್ಯೆ ಹೆಚ್ಚಾಗಿದೆ. ಗಣಿಗಾರಿಕೆ, ಸಾಗಾಣಿಕೆ ಸೇರಿದಂತೆ ಮರಳು ನೀತಿಯನ್ನು ಸರಳೀಕರಣಗೊಳಿಸಲು ಅಧಿಕಾರಿಗಳ ತಂಡ ನೆರೆರಾಜ್ಯಗಳಲ್ಲಿ ಅಧ್ಯಯನ ನಡೆಸುತ್ತಿದೆ.ಆಂಧ್ರ, ಮಧ್ಯಪ್ರದೇಶ, ತೆಲಂಗಾಣ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿಕಾರಿಗಳ ತಂಡ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ನದಿ ಮೂಲದ ಗಣಿಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಅಧ್ಯಯನ ನಡೆಸಿ ವರದಿ ನೀಡಲಿದೆ.ಈ ವರದಿ ಆಧರಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಹೇಳಿದರು.
100ಕ್ಕೂ ಹೆಚ್ಚು ಅಕ್ರಮವಾಗಿ ಮರಳು ಸಾಗಾಣೆ ಮಾಡಿದ ವಾಹನಗಳನ್ನು ಜಪ್ತಿ ಮಾಡಿದ್ದು, ಇದರಿಂದ ಇಂತಹ ಅಕ್ರಮಗಳನ್ನು ನಿಯಂತ್ರಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಮರಳು ನಿಕ್ಷೇಪ ಹಂಚಿಕೆಯಿಂದ ದರ ನಿಗದಿಗೆ ಇರುವ ಕಾರ್ಯಪಡೆಯೇ ಹಂಚಿಕೆ ಹಾಗೂ ದರ ನಿಗದಿಗೆ ಅನುಮತಿ ನೀಡಲಿದೆ ಎಂದರು.
ಮಲೇಷ್ಯಾದಿಂದ ಈಗಾಗಲೇ ರಾಜ್ಯಕ್ಕೆ 3 ಲಕ್ಷ ಟನ್ ಮರಳು ಬಂದಿದ್ದು, ವಿಶಾಖಪಟ್ಟಣ ಹಾಗೂ ಮಂಗಳೂರು ಬಂದರಿನಲ್ಲಿ ತಲಾ 1.5ಲಕ್ಷ ಟನ್ ಮರಳು ಇದ್ದು, ಇನ್ನೂ ವಿಲೇವಾರಿಯಾಗಿಲ್ಲ ಎಂದರು.
ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮರಳು ಕೊರತೆ ಇದ್ದು, ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮತ್ತು ಅಕ್ರಮ ಮರಳು ಸಾಗಾಣೆಗೆ ದುಪ್ಪಟ್ಟು ದಂಡ ವಿಧಿಸಿ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.