ಬೆಂಗಳೂರು, ಡಿ.28-ನಿಗಮ ಮಂಡಳಿಗಳ ನೇಮಕ, ರಾಜಕೀಯ ಕಾರ್ಯದರ್ಶಿಗಳ ನೇಮಕವಾಗಿ ಒಂದು ವಾರ ಕಳೆದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇನ್ನೂ ಅಧಿಕೃತ ಮುದ್ರೆಯೊತ್ತಿಲ್ಲ.
ಜೆಡಿಎಸ್ ಸಚಿವರಾಗಿರುವವರ ಕೆಲವು ಖಾತೆಗಳ ವ್ಯಾಪ್ತಿಗೆ ಬರುವ ನಿಗಮಗಳಿಗೆ ಕಾಂಗ್ರೆಸ್ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಏಕಾಏಕಿ 20 ಪ್ರಮುಖ ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಶಾಸಕರನ್ನು ನೇಮಕ ಮಾಡಿರುವುದು ಜೆಡಿಎಸ್‍ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕಾಂಗ್ರೆಸ್‍ನ ವಿ.ಮುನಿಯಪ್ಪ ಅವರನ್ನು ನೇಮಿಸಿರುವುದು ಕೂಡ ಅತೃಪ್ತಿಗೆ ಕಾರಣವಾಗಿದೆ ಎಂದು ಹೇಳಲಾಗಿದ್ದು, ಇದಕ್ಕಾಗಿ ಸಹಿ ಹಾಕಲು ವಿಳಂಬ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕಾಗಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಜೆಡಿಎಸ್ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲದ ಪ್ರಕಾರ ಸಂಪುಟ ವಿಸ್ತರಣೆ, ಪುನಾರಚನೆ, ಖಾತೆ ಹಂಚಿಕೆಯಿಂದ ಉಂಟಾದ ಬಿಕ್ಕಟ್ಟು ಬಗೆಹರಿದ ಮೇಲೆ ಸಹಿ ಹಾಕಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ನೇಮಕವಾದರೂ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ನೂತನ ಶಾಸಕರಿಗೆ ಛೇರ್, ಗೂಟಾದ ಕಾರು ಸಿಕ್ಕಿಲ್ಲ. ಈ ವರ್ಷದಲ್ಲೇ ಸಿಗುತ್ತದೆಯೇ ಅಥವಾ ಮುಂದಿನ ವರ್ಷದವರೆಗೂ ಕಾಯಬೇಕಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
ಸಂಪುಟ ವಿಸ್ತರಣೆಗೂ ಮುನ್ನವೇ ನಿಗಮ ಮಂಡಳಿಗಳ ಅಧ್ಯಕ್ಷರ , ರಾಜಕೀಯ ಕಾರ್ಯದರ್ಶಿಗಳ ನೇಮಕಾತಿ ಪಟ್ಟಿ ಕಾಂಗ್ರೆಸ್‍ನಿಂದ ಹೊರಬಿದ್ದಿತ್ತು. ಆದರೆ ಈವರೆಗೂ ಅಧಿಕೃತ ಆದೇಶ ಸರ್ಕಾರದಿಂದ ಹೊರಬಂದಿಲ್ಲ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಒಂದೂವರೆ ವರ್ಷಗಳ ನಂತರ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಿದ್ದರು.ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ 6 ತಿಂಗಳಲ್ಲೇ 30 ನಿಗಮ ಮಂಡಳಿಗಳಿಗೆ ನೇಮಕ ಮಾಡಲು ಮುಂದಾಗಿದ್ದು, ಕಾಂಗ್ರೆಸ್‍ನಿಂದ 20 ಮಂದಿಯ ಪಟ್ಟಿ ಹೊರಬಿದ್ದಿದೆ.ಅಧಿಕೃತ ಮುದ್ರೆ ಬೀಳಬೇಕಾಗಿದೆ.ಯಾವಾಗ ಆಗುತ್ತದೆ ಕಾದುನೋಡಬೇಕು.