
ಮುಂಬೈ: ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಪ್ರದರ್ಶನಕ್ಕೂ ಮುನ್ನ ತನಗೆ ತೋರಿಸಬೇಕು ಎಂದು ಮಹಾರಾಷ್ಟ್ರದ ಯೂತ್ ಕಾಂಗ್ರೆಸ್ ಒತ್ತಾಯಿಸಿದೆ.
‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಮುಖ್ಯ ಪಾತ್ರದಲ್ಲಿ ನಟ ಅನುಪಮ್ ಖೇರ್ ನಟಿಸಿದ್ದು, ನಿನ್ನೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಬಿಡುಗಡೆ ಆಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಅದು ವೈರಲ್ ಆಗಿ, ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಮಹಾರಾಷ್ಟ್ರದ ಯೂತ್ ಕಾಂಗ್ರೆಸ್, ‘ಈ ಚಿತ್ರ ಬಿಡುಗಡೆಗೊಳ್ಳುವ ಮೊದಲು ತನಗೆ ತೋರಿಸಬೇಕು ಮತ್ತು ಕೆಲ ದೃಶ್ಯಗಳು ಸತ್ಯಕ್ಕೆ ದೂರವಾಗಿವೆ. ಅಂತಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಈ ಬೇಡಿಕೆಗೆ ಮಣಿಯದಿದ್ದರೆ ದೇಶದಲ್ಲಿ ಎಲ್ಲಿಯೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ.
ಯುಪಿಎ ಆಡಳಿತ ಅವಧಿಯಲ್ಲಿನ 2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರನ್ನು ಮುಖ್ಯ ಪಾತ್ರದಲ್ಲಿ ಕಾಣಿಸುವ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರವು ವಿವಾದಾತ್ಮಕ ದೃಶ್ಯಗಳಿಂದ ಚಿತ್ರ ಪ್ರೇಮಿಗಳಲ್ಲಿ ಈಗಾಗಲೇ ತೀವ್ರವಾದ ಕುತೂಹಲ ಹುಟ್ಟಿಸಿದೆ.
ಈ ಚಿತ್ರ 2019ರ ಜನವರಿ 11ರಂದು ತೆರೆಗೆ ಅಪ್ಪಳಿಸಲಿದ್ದು, ಸಂಜಯ್ ಬರು ವಿರಚಿತ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಶೀರ್ಷಿಕೆಯ ಪುಸ್ತಕವನ್ನು ಆಧರಿಸಿದೆ.