ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ 17 ಕಡೆ ಎಸಿಬಿ ದಾಳಿ, ಭ್ರಷ್ಟರಿಗೆ ನಡುಕ

ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರು, ಚಿಂತಾಮಣಿ, ಮೈಸೂರು, ಉಡುಪಿ ಸೇರಿ 17 ಕಡೆ ಆದಾಯಕ್ಕೂ ಹೆಚ್ಚು ಆಸ್ತಿಗಳಿಸಿದ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬಸವೇಶ್ವರನಗರ ಮತ್ತು ಸಹಕಾರನಗರ ಎರಡು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸುವ ಮೂಲಕ ಬೆಳ್ಳಂಬೆಳಗ್ಗೆ ಭ್ರಷ್ಟ ಆಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಐವರು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

ಹಾಸನ ಜಿಲ್ಲೆಯ ಬೇಲೂರಿನ ಸಹಕಾರಿ ಬ್ಯಾಂಕ್ ಅಧಿಕಾರಿ ಆರ್. ಶ್ರೀಧರ್, ಯೋಜನಾ ಆಯೋಗದ ಸಹಾಯಕ ನಿರ್ದೇಶಕ ಬೇಸತ್ತಪ್ಪ, ದಾವಣಗೆರೆಯ ಹೆಚ್ಚುವರಿ ಕೃರ್ಷಿ ನಿದೇರ್ಶಕ ಹಂಸವೇಣಿ, ಮಂಗಳೂರಿನ ಸರ್ಕಾರಿ ಶೈಕ್ಷಣಿಕ ತರಬೇತಿ ಕೇಂದ್ರದ ಡಿ. ಮಂಜುನಾಥ್ ಮತ್ತು ಮೈಸೂರಿನ ಮುಡಾ ಕಿರಿಯ ಅಭಿಯಂತರ ಕೆ. ಮಾಣಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ದಾವಣಗೆರೆಯ ಕೃಷಿ ಇಲಾಖೆ ಪ್ರಭಾರಿ ನಿರ್ದೇಶಕಿ ಹಂಸವೇಣಿ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹಂಸವೇಣಿ ಹೆಸರಿನಲ್ಲಿ 75/40 ಅಳತೆಯ 3 ಅಂತಸ್ತಿನ ಒಂದು ಮನೆ, ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ 15 ಎಕರೆ ಜಮೀನು, 1 ಜೈಲೋ ಕಾರು, 5 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್ ಹಾಗೂ ಅಪಾರ ಪ್ರಮಾಣದ ಬೆಳ್ಳಿ, ಬಂಗಾರ ಪತ್ತೆಯಾಗಿದೆ. ನಾಗವೇಣಿ ಪತಿ ಕಾರವಾರ ತೋಟಗಾರಿಕೆ ಇಲಾಖೆ ಎಡಿ ಎನ್. ಕುಮಾರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಏಕಾಕಾಲಕ್ಕೆ ಪತಿ ಪತ್ನಿಯರ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಹಂಸವೇಣಿ ತಂದೆ ಮನೆ ಮೇಲೂ ದಾಳಿ ನಡೆಸಿದ್ದಾರೆ. ಇನ್ನು ದಾವಣಗೆರೆ ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ದಾಖಲೆಗಳನ್ನು ಪರಿಶೀಲನೆ ನಡೆಯುತ್ತಿದೆ.

ಉಡುಪಿಯಲ್ಲೂ ಎಸಿಬಿ ಅಧಿಕಾರಿಗಳು ಭ್ರಷ್ಟರ ಮೇಲೆ ದಾಳಿ ಮಾಡಿದ್ದು, ಮಂಗಳೂರಿನ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ರೀಡರ್ ಮಂಜುನಾಥಯ್ಯ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ. ಈ ಹಿಂದೆ ಉಡುಪಿ ನಗರಸಭೆ ಪೌರಾಯುಕ್ತನಾಗಿ ಕಾರ್ಯನಿರ್ವಹಿಸಿದ್ದ ಮಂಜುನಾಥಯ್ಯ, ಸದ್ಯ ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಅದಕ್ಕೂ ಮೊದಲು ಅವರು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದರು. ಮಣಿಪಾಲದ ಪ್ರಿಯದರ್ಶಿನಿ ಫ್ಲಾಟ್ ನಲ್ಲಿರುವ ಮಂಜುನಾಥಯ್ಯ ಮನೆ ಮತ್ತು ಏಕಕಾಲದಲ್ಲಿ ಚಿಕ್ಕಮಗಳೂರು ಕಡೂರು ತಾಲೂಕು ಬೀರೂರಿನಲ್ಲೂ ದಾಳಿ ಮಾಡಲಾಗಿದೆ.

ಶಿವಮೊಗ್ಗ ಚೆನ್ನಗಿರಿಯಲ್ಲಿರುವ ಮಂಜುನಾಥನ ಬಾವನ ಮನೆಗೂ ದಾಳಿಯಾಗಿದೆ. ಎಸಿಬಿಯ ಪಶ್ಚಿಮ ವಲಯ ಎಸ್‍ಪಿ ಶೃತಿಯವರ ನೇತೃತ್ವದಲ್ಲಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ, ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಮೇಲಿಂದ ಮೇಲೆ ದೂರು ಬಂದ ಕಾರಣ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಜಿಲ್ಲೆಯ ಸಹಕಾರ ಸಂಘಗಳ ಇಲಾಖೆಯ ನಿಬಂಧಕ ಶ್ರೀಧರ್ ಗೆ ಸ್ವಗ್ರಾಮ ಚಿಂತಾಮಣಿ ಆಗಿದ್ದು, ಅವರ ಸ್ವಂತ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ಮನೆಯಲ್ಲಿ ಯಾರೂ ವಾಸವಿಲ್ಲವಾದರೂ ಖಾಲಿ ಮನೆಯ ಬೀಗ ತೆಗೆಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಶ್ರೀಧರ್ ಬಾವ ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ ಮನೆ ಮೇಲೂ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ