ಬೆಂಗಳೂರು,ಡಿ.28- ಕಾಂಗ್ರೆಸ್ನಲ್ಲಿ ಗೆದ್ದ ಹಿರಿಯರಿಗೆ ಅಧಿಕಾರವಿಲ್ಲ; ಅಧಿಕಾರ ಸಿಕ್ಕವರಿಗೆ ಸಮಾಧಾನವಿಲ್ಲ. ಹಿರಿಯರಿಂದ ಸೂಕ್ತ ಮಾರ್ಗದರ್ಶನವೂ ಸಿಗುತ್ತಿಲ್ಲ ಎಂದು ಹಿರಿಯ ಮುಖಂಡ ಹನುಮಂತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ಎದರೇ ತರಾಟೆಗೆ ತೆಗೆದುಕೊಂಡ ಅವರು ಪಕ್ಷದ ಪರಿಸ್ಥಿತಿಯನ್ನು ಅನಾವರಣ ಮಾಡಿದರು.
ಹಿರಿಯ ಕಾಂಗ್ರೆಸ್ಸಿಗರಿಗೆ ಆದ್ಯತೆ ಸಿಗದಿರುವ ಬಗ್ಗೆ ಪರೋಕ್ಷ ಚಾಟಿ ಬೀಸಿದರು.ಅಧಿಕಾರ ಸಿಕ್ಕವರು ಸಮಾಧಾನಿತರಾಗಿರಬೇಕು ಎಂಬ ಸಲಹೆಯನ್ನು ಕೂಡ ನೀಡಿದರು.
ಲೋಕಸಭೆ ಚುನಾವಣೆ ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇದೆ.ಕೇವಲ ಕಾರ್ಯಕರ್ತರಷ್ಟೇ ಅಲ್ಲ ಎಲ್ಲಾ ಹಿರಿಯರು, ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಆಗ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಅವರು ಹೇಳಿದರು.
ನಾವು ಸಂಕೀರ್ಣ ಪರಿಸ್ಥಿತಿಯಲ್ಲಿದ್ದೇವೆ. ಪ್ರತಿಷ್ಠೆಯನ್ನು ಬದಿಗಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ 134 ವರ್ಷಗಳ ಇತಿಹಾಸವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಈಗ ಅತಂತ್ರವಾಗಿದೆ.ಎಲ್ಲರೂ ಒಟ್ಟಾಗಿ ಮತ್ತೆ ಪಕ್ಷವನ್ನು ಕಟ್ಟಬೇಕಾಗಿದೆ ಎಂದರು.
ಹಿರಿಯ ಮುಖಂಡರು, ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಸ್ತುತ ಹನುಮಂತಪ್ಪನವರಂತಹ ಹಿರಿಯರ ಮಾರ್ಗದರ್ಶನದ ಅವಶ್ಯಕತೆಯಿದೆ. ಲೋಕಸಭೆ ಚುನಾವಣೆಗೆ ಕಡಿಮೆ ಅವಧಿಯಿದೆ.ನಾವು ಜನರ ಬಳಿ ಹೋಗಬೇಕು.ಪಕ್ಷವನ್ನು ಸಂಘಟಿಸಿ, ಸದೃಢಗೊಳಿಸಿ, ಬೆಳೆಸಬೇಕಾಗಿದೆ.ರಾಹುಲ್ರನ್ನು ಪ್ರಧಾನಿ ಮಾಡಲು ಎಲ್ಲರೂ ಹೆಚ್ಚು ಶ್ರಮಿಸಬೇಕಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ಕಾಂಗ್ರೆಸ್ ಹೆಚ್ಚು ಶಕ್ತಿಯುತವಾಗಿದೆ.ಈ ಬಗ್ಗೆ ಆತಂಕ ಪಡುವುದು ಬೇಡ.ಕಾಂಗ್ರೆಸ್ ಶಕ್ತಿಯನ್ನು ಮತ್ತಷ್ಟು ಬಲಗೊಳಿಸೋಣ ಎಂದು ಕರೆ ನೀಡಿದರು.
ಪರಮೇಶ್ವರ್, ಸಿದ್ದರಾಮಯ್ಯ ನಡುವೆ ಖಾತೆ ಹಂಚಿಕೆ ಸಂಬಂಧ ಯಾವುದೇ ವಾಗ್ವಾದ ನಡೆದಿಲ್ಲ. ನಾನು ಅಲ್ಲಿಯೇ ಇದ್ದೆ ಎಂದು ಹೇಳಿದರು.
ಹಿರಿಯ ಮುಖಂಡರಾದ ಎಂ.ವಿ.ರಾಜಶೇಖರನ್, ರಾಮಲಿಂಗಾರೆಡ್ಡಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಪುಷ್ಪಾ ಅಮರನಾಥ್ ಮತ್ತಿತರರು ಇದ್ದರು.