ಬೆಂಗಳೂರು,ಡಿ.28-ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಸ ಸಮಸ್ಯೆ ಸದ್ದು ಮಾಡುತ್ತಿದೆ!
ಆಗಾಗ್ಗೆ ಕಸ ವಿಲೇವಾರಿ ಜಾಗದ ಕುರಿತಂತೆ ಪ್ರತಿಭಟನೆಗಳು ನಡೆಯುತ್ತಿದ್ದವಾದರೂ, ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿಯವರ ಮಧ್ಯಸ್ಥಿಕೆಯಿಂದಾಗಿ ತಣ್ಣಗಾಗುತ್ತಿತ್ತು. ಆದರೆ ಇದೀಗ ಮತ್ತೆ ಕಸ ಸಮಸ್ಯೆ ಕುರಿತಂತೆ ಸಣ್ಣದೊಂದು ಪ್ರತಿಭಟನೆಯ ಕಿಡಿ ಇಡೀ ನಗರವನ್ನೇ ವ್ಯಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಬೆಂಗಳೂರಿನ ಹಿರಿಯ ಹಾಗೂ ಪ್ರಭಾವಿ ಶಾಸಕ ಹಾಗೂ ಬಿಬಿಎಂಪಿ ಆಡಳಿತವನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಯಿಂದ ಜಾರದಂತೆ ರಾಜಕೀಯ ಚಾಣಾಕ್ಷತನ ಮೆರೆದಿದ್ದ ರಾಮಲಿಂಗಾರೆಡ್ಡಿಯವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಬಹುತೇಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗಾಗಲೇ ಅನೇಕರು ರಾಮಲಿಂಗಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡುವಂತೆ ನಿರಂತರ ಒತ್ತಡ ಹೇರುತ್ತಲೇ ಬಂದಿದ್ದಾರೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ತಣ್ಣಗೆ ಮಲಗಿದ್ದ ಸಮಸ್ಯೆಗಳು ಮತ್ತೆ ಹೆಡೆ ಬಿಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ಆ ಮೂಲಕ ರಾಮಲಿಂಗಾರೆಡ್ಡಿಯವರ ಸಾಮಥ್ರ್ಯವನ್ನು ಮತ್ತೊಮ್ಮೆ ಕೈ ಕಮಾಂಡ್ಗೆ ತಿಳಿಸುವ ಕೆಲಸ ನಡೆಯುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ದೊಡ್ಡನಾಗಮಂಗಲ, ಚಿಕ್ಕ ನಾಗಮಂಗಲ, ಕೋನಪ್ಪನ ಅಗ್ರಹಾರ, ಗೋವಿಂದ ಶೆಟ್ಟಿ ಪಾಳ್ಯದ ನಾಗರೀಕರು ತ್ಯಾಜ್ಯ ವಿಲೇವಾರಿಯಿಂದ ಹೊರ ಬರುತ್ತಿರುವ ದುರ್ವಾಸನೆಯಿಂದ ಬೇಸತ್ತು ನಾಳೆ ಪ್ರತಿಭಟನೆಗೆ ಮುಂದಾಗುವ ಮೂಲಕ ಕಸ ಗಲಾಟೆಗೆ ಮುನ್ನುಡಿ ಬರೆಯುತ್ತಿದ್ದಾರೆ.
ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಪ್ರತಿಭಟನೆಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೂಪ ತಳೆಯುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.