ಹೊಸ ವರ್ಷಾಚರಣೆಗೆ ಶ್ರೀರಾಮ ಸೇನೆಯಿಂದ ವಿರೋಧ

ಬೆಂಗಳೂರು, ಡಿ.28- ಪಾಶ್ಚಿಮಾತ್ಯರನ್ನು ಅನುಕರಣೆ ಮಾಡಿ ಜನವರಿ 1ರಂದು ಆಚರಣೆ ಮಾಡುವ ಹೊಸ ವರ್ಷಾಚರಣೆಯನ್ನು ಶ್ರೀರಾಮಸೇನೆ ತೀವ್ರವಾಗಿ ವಿರೋಧಿಸುತ್ತದೆ ಎಂದು ಬೆಂಗಳೂರು ನಗರ ಘಟಕದ ಅಧ್ಯಕ್ಷ ವಿನಯ್‍ಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ಖಂಡನೀಯ.ಯುಗಾದಿ ನಮಗೆ ಹೊಸ ವರ್ಷವಾಗಿದ್ದು, ಇದನ್ನು ನಾವು ಸಂಭ್ರಮದಿಂದ ಆಚರಿಸುವುದು ಸೂಕ್ತ.ಮದ್ಯಪಾನ ಮಾಡಿ ತಡರಾತ್ರಿ ತುಂಡು ಬಟ್ಟೆ ಉಟ್ಟು ಬೀದಿಯಲ್ಲಿ ಕುಣಿಯುವ ಪದ್ಧತಿಯನ್ನು ಸಹಿಸಲಾಗದು. ಇದು ಸಂಸ್ಕøತಿಯ ಲಕ್ಷಣವಲ್ಲ. ನಮ್ಮ ಮುಂದಿನ ಪೀಳಿಗೆ ಅನುಕರಣೆ ಮಾಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರದ ಕೆಲ ಕಾಲೇಜುಗಳು ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳ ಮಾರಟ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ. ಮತ್ತಷ್ಟು ಸ್ವೇಚ್ಛಾಚಾರದಿಂದ ವರ್ತಿಸಲು ಅವಕಾಶ ನೀಡಿದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ.ಹಿಂದೂಗಳ ದೇಶವಾಗಿರುವ ಭಾರತದಲ್ಲಿ ಹೊಸ ವರ್ಷಾಚರಣೆ ಹೆಸರಿನಲ್ಲಿ ನಗರದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲಾಗುತ್ತಿದೆ. ಹೆಣ್ಣು ಮಕ್ಕಳ ಸಂಸ್ಕøತಿಯನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹೊಸ ವರ್ಷಾಚರಣೆ ಹೆಸರಿನಲ್ಲಿ ಹಲವು ಮಾಫಿಯಾಗಳು ಯುವ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಮಾದಕ ವಸ್ತುಗಳು, ಸೆಕ್ಸ್ ಮಾಫಿಯಾಗಳಿಗೆ ಹೊಸ ವರ್ಷಾಚರಣೆ ವೇದಿಕೆಯಾಗುತ್ತಿದೆ. ಇದಲ್ಲದೆ, ಹೊಸ ವರ್ಷದ ಮೊದಲ ದಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯಿಂದ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ.ಅನುದಾನ ನೀಡುವ ಪಿಂಕ್ ಬೇಬಿ ಯೋಜನೆಯನ್ನು ಮುಂದುವರಿಸುವುದಾಗಿ ಮೇಯರ್ ಗಂಗಾಂಬಿಕೆ ಘೋಷಿಸಿರುವುದನ್ನು ಕೂಡ ಇವರು ವಿರೋಧಿಸಿದ್ದಾರೆ.

ಇದರ ಬದಲು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದು ಸೂಕ್ತ.ಆಡಳಿತದಲ್ಲಿರುವವರು ಸಂಸ್ಕøತಿ ರಕ್ಷಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ