ಮರಳಿಗಾಗಿ ಹೋರಾಟ ಮಾಡಿದವರ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಶಾಸಕ ರೇಣುಕಾಚಾರ್ಯ ಒತ್ತಾಯ

ಬೆಂಗಳೂರು,ಡಿ.28- ಮರಳಿಗಾಗಿ ಹೋರಾಟ ಮಾಡಿದವರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಗ್ರಾಮದಲ್ಲಿ ಮನೆ ಮತ್ತು ಶೌಚಾಲಯ ನಿರ್ಮಾಣಕ್ಕೂ ಮರಳು ಇಲ್ಲದಂತಾಗಿದೆ. ಸರ್ಕಾರಿ ಕಾಮಗಾರಿಗಳಿಗೆ ಎಂ.ಸ್ಯಾಂಡ್ ಬಳಸಲಾಗುತ್ತಿದೆ.ಇದನ್ನು ಬಳಸಿದ ಕಾಮಗಾರಿಗಳು ಕಳಪೆಯಾಗಿವೆ. ಹಾಗಾಗಿ ಮರಳಿಗಾಗಿ ಹೋರಾಟ ನಡೆಸಲಾಗುತ್ತಿದ್ದು, ಆದರೆ ಹೋರಾಟಗಾರರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಆರೋಪಿಸಿದರು.

ಮರಳು ಬ್ಲಾಕ್(ನಿಕ್ಷೇಪ)ಗಳ ಮೂಲಕ ಮರಳನ್ನು ಸರ್ಕಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ಸರ್ಕಾರದ ವೈಫಲ್ಯದ ವಿರುದ್ಧ ಗಟ್ಟಿ ದನಿ ಎತ್ತಿದ್ದರಿಂದ ರಾಜಕೀಯವಾಗಿ ಮುಗಿಸಲು ನಮ್ಮ ವಿರುದ್ಧ ಷಡ್ಯಂತರ ನಡೆದಿದೆ.ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಕೇಸ್‍ಗಳನ್ನು ಹಾಕಲಾಗುತ್ತಿದೆ.ನಾವು ಹೋರಾಟ ಮಾಡುವಾಗ ಸೌಜನ್ಯಕ್ಕಾದರೂ ಸಚಿವರು ನಮ್ಮನ್ನು ಭೇಟಿ ಮಾಡಲಿಲ್ಲ ಅಥವಾ ಸಭೆಯನ್ನೂ ಕರೆಯಲಿಲ್ಲ. ಬದಲಿಗೆ ಕೇಸುಗಳನ್ನು ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನ ಗಾಡಿಗೆ ಮರಳು ತುಂಬುವವರ ವಿರುದ್ಧವೂ ಕೇಸು ಹಾಕಲಾಗಿದೆ.ಈ ಕೇಸ್‍ಗಳನ್ನು ವಾಪಸ್ ಪಡೆಯದಿದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದ ಅವರು, ಮುಖ್ಯಮಂತ್ರಿ ಸೇರಿದಂತೆ ಸಚಿವರನ್ನು ಭೇಟಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದರು.

ಬಿಜೆಪಿ ಶಾಸಕರ ಹೋರಾಟವನ್ನೂ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ.ನಾವು 48 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರೂ ಜಿಲ್ಲಾಧಿಕಾರಿ, ಎಸ್ಪಿ ಸಮಸ್ಯೆ ಪರಿಹರಿಸಲು ಮುಂದಾಗಲಿಲ್ಲ. ಕನಕಪುರ ಮತ್ತು ರಾಮನಗರಗಳಲ್ಲಿ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಹೊನ್ನಾಳಿಯಿಂದ ಬೆಂಗಳೂರಿಗೆ ಮರಳು ಬರುತ್ತಿದೆ.ಒಂದು ಟ್ಯಾಂಕರ್ ಮರಳಿಗೆ 10ರಿಂದ 30 ಸಾವಿರ ರೂ.ಇದೆ. ಹಾಗಾಗಿ ಸಾಮಾನ್ಯ ಜನ ಹೇಗೆ ಮನೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದರು.

ಮೈಸೂರಿನಿಂದ ಕೇರಳಕ್ಕೆ ಮರಳು ಹೋಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಸರ್ಕಾರ ಮರಳು ಒದಗಿಸಲು ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಳಗಾಂ ಅಧಿವೇಶನದಲ್ಲಿ ಈ ಸಮಸ್ಯೆ ಕುರಿತಂತೆ ಚರ್ಚಿಸಲು ಸಭಾಧ್ಯಕ್ಷರಲ್ಲಿ ವಿನಂತಿ ಮಾಡಿದ್ದೇನೆ. ಅವಕಾಶ ಸಿಕ್ಕಿರಲಿಲ್ಲ.ಕೊನೆಯ ಎರಡು ದಿನ ಅವಕಾಶ ನೀಡಲಾಗಿತ್ತು.ಆದರೆ ಆ ದಿನ ಸಂಪೂರ್ಣವಾಗಿ ರೈತರ ಸಾಲಮನ್ನಾ ವಿಚಾರ ಚರ್ಚೆಗೆ ಬಂದಿತ್ತು.ಮರಳು ಸಮಸ್ಯೆ ಹಾಗೇ ಉಳಿಯಿತು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ