ಮುಂಬೈ: ಮಹಾರಾಷ್ಟ್ರ ಸರ್ಕಾರವು ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ದೇವೇಂದ್ರ ಫಡ್ನವಿಸ್ ಸರ್ಕಾರವು 7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ.
17 ಲಕ್ಷ ಸರ್ಕಾರಿ ನೌಕರರು ಇದರ ಫಲಾನುಭವಿಗಳಾಗಿದ್ದಾರೆ. ಸರ್ಕಾರಿ ನೌಕರರ ಸಂಬಳ ಏರಿಕೆಗೆ 20 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲು ರಾಜ್ಯ ಸರ್ಕಾರ ಮಂದಾಗಿದೆ.
7 ನೇ ವೇತನ ಆಯೋಗ ಶಿಫಾರಸ್ಸುಗಳನ್ನು ಇನ್ನೂ ಅನೇಕ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿಲ್ಲ. ಆದರೆ ಮಹಾರಾಷ್ಟ್ರ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಓಲೈಕೆಗೆ ಮುಂದಾಗಿದೆ ಎನ್ನಲಾಗಿದೆ.
ಲಕ್ಷಾಂತರ ಮಂದಿಗೆ ಇದರಿಂದ ಅನುಕೂಲ ಸಿಗಲಿದೆ. ಸರ್ಕಾರಿ ಶಾಲೆ, ಅನುದಾನಿತ ಶಿಕ್ಷಣಾ ಸಂಸ್ಥೆ, ಜಿಲ್ಲಾ ಪರಿಷತ್ ಮಟ್ಟದ ವಿದ್ಯಾಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಸುಮಾರು 20.5 ಲಕ್ಷ ಸಿಬ್ಬಂದಿಗಳಿಗೆ ಸಂಬಳ ಏರಿಕೆ, ಭತ್ಯೆ ಸಿಗಲಿದೆ ಎಂದು ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್ ಮುಂಗಟಿವಾರ್ ತಿಳಿಸಿದ್ದಾರೆ.
7 ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಡಿ ಗ್ರೂಪಿನ ಉದ್ಯೋಗಿಗೆ ಪ್ರತಿ ತಿಂಗಳಿಗೆ 15,000 ರೂ., ಸಿ ಗ್ರೂಪಿನ ಉದ್ಯೋಗಿಗೆ 18,000 ರೂ. ಸಂಬಳ ಸಿಗಲಿದೆ. ಒಟ್ಟಾರೆ ಸರ್ಕಾರಕ್ಕೆ ವಾರ್ಷಿಕವಾಗಿ 7,731 ಕೋಟಿ ಹೊರೆ ಬೀಳಲಿದೆ.