ನಗರದಲ್ಲಿ ಡಿ.28ರಿಂದ ಡಿ.30ರವರೆಗೆ ವಿಶ್ವ ಹವ್ಯಕ ಸಮ್ಮೇಳನ

ಬೆಂಗಳೂರು, ಡಿ.27- ನಗರದ ಅರಮನೆ ಆವರಣದಲ್ಲಿ ಇದೇ 28 ರಿಂದ 30ರ ವರೆಗೆ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ್ ಈ ಕುರಿತು ಮಾತನಾಡಿ, ಡಿ.28 ರಿಂದ 30ರ ವರೆಗೆ ಸಭಾದ ಅಮೃತ ಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಸಮಾವೇಶದ ವೇಳೆ 75 ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. 75 ವೈದ್ಯರು, 75 ಸಾಧಕರು, 75 ಕೃಷಿಕರು, 75 ವಿದ್ಯಾರ್ಥಿಗಳು, 75 ಗೋದಾನ, 75 ಯೋಧರಿಗೆ ಸನ್ಮಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

28ರಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ವಜುಬಾಯಿ ರೂಢಾಬಾಯಿ ವಾಲಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ರಾಮಚಂದ್ರಪುರ ಮಠದ ಶ್ರೀ ರಾಘವೇಂದ್ರ ಭಾರತಿ ಸ್ವಾಮೀಜಿ, ಶ್ರೀಕ್ಷೇತ್ರ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ವಹಿಸುವರು ಎಂದು ಗಿರಿಧರ್ ತಿಳಿಸಿದರು.

29ರಂದು ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ನ್ಯಾ.ಶಿವರಾಜ್ ಪಾಟೀಲ್ ಬಿಡುಗಡೆ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಶಾಸಕ ಶಿವರಾಂ ಎಂ.ಹೆಬ್ಬಾರ್, ರವಿ ಹೆಗ್ಡೆ, ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಹವ್ಯಕ ಸಮ್ಮೇಳನದ ಗೌರವಾಧ್ಯಕ್ಷ ಭೀಮೇಶ್ವರ ಜೋಷಿ ಮತ್ತಿತರ ಗಣ್ಯರು ಉಪಸ್ಥಿತರಿರುತ್ತಾರೆ.

28ರಂದು ಸಂಜೆ ಗೀತ-ನಾಟ್ಯ-ವೈಭವ, 29ರಂದು ಯಕ್ಷ ನೃತ್ಯೋತ್ಸವ, 30ರಂದು ಅಭಿನಯ ರಂಗ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ