ಬೆಂಗಳೂರು, ಡಿ.27- ದುರಸ್ತಿ ಕಾರ್ಯ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ನಾಳೆ ಸಂಜೆಯಿಂದ ಸಿರಸಿ ಫ್ಲೈಓವರ್ ಬಂದ್ ಆಗಲಿದೆ.
ದುರಸ್ತಿ ಕಾರ್ಯದ ಪ್ರಯುಕ್ತ ನಾಳೆ ಸಂಜೆಯಿಂದ ಸುಮಾರು 40 ದಿನಗಳ ಕಾಲ ಸಿರಸಿ ಫ್ಲೈ ಓವರ್ ಅನ್ನು ಬಂದ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಈಗಾಗಲೇ ಸಂಚಾರಿ ಪೊಲೀಸರೊಂದಿಗೆ ಚರ್ಚೆ ನಡೆಸಲಾಗಿದೆ. ನಾಳೆಯಿಂದ ಪುರಭವನ ಹಾಗೂ ಮೈಸೂರು ಮಾರ್ಗದ ರಸ್ತೆಯನ್ನು ಮೊದಲ ಹಂತದಲ್ಲಿ ಬಂದ್ ಮಾಡಲಾಗುತ್ತದೆ. ಇದರಿಂದ ವಾಹನ ಸವಾರರಿಗೆ ಆಗುವ ತೊಂದರೆ ತಪ್ಪಿಸಲು ಫ್ಲೈ ಓವರ್ ಕೆಳಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಬೆಳಗ್ಗೆ ಮೈಸೂರು ರಸ್ತೆ ಮಾರ್ಗದ ವಾಹನಗಳಿಗೆ ಒನ್ ವೇ ಸಂಚಾರಕ್ಕೆ ಅನುವು ಮಾಡಿ ಸಂಜೆ ಟೌನ್‍ಹಾಲ್‍ನಿಂದ ಮೈಸೂರು ರಸ್ತೆ ಮಾರ್ಗದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
ರಿಚ್‍ಮಂಡ್ ವೃತ್ತದ ರಸ್ತೆ ಮಾದರಿಯಂತೆ ಮರು ಡಾಂಬರೀಕರಣ ಮಾಡಲಾಗುತ್ತದೆ. ಲೋಡ್ ಕೆಪಾಸಿಟಿ ಆದರಿಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಹಾಗಾಗಿ ಮರು ಡಾಂಬರೀಕರಣದ ಬಳಿಕ 5 ವರ್ಷಗಳ ಕಾಲ ಈ ರಸ್ತೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ವಾಹನ ಸವಾರರು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.