ಬೆಂಗಳೂರು, ಡಿ.27- ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಅಂತಿಮಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ನೂತನ 8 ಮಂದಿ ಸಚಿವರಿಗೂ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಲಿದ್ದಾರೆ. ಯಾರ್ಯಾರಿಗೆ ಯಾವ ಯಾವ ಖಾತೆ ಎಂಬುದು ಪ್ರಕಟವಾಗಲಿದೆ ಎಂದರು.
ತಮ್ಮಿಂದ ಖಾತೆ ಹಂಚಿಕೆ ವಿಳಂಬವಾಯಿತು ಎಂಬ ಆರೋಪದಲ್ಲಿ ಹುರುಳಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆಗಮಿಸುವುದು ಎರಡು ದಿನ ತಡವಾದ್ದರಿಂದ ಖಾತೆ ಹಂಚಿಕೆಯಲ್ಲಿ ವಿಳಂಬವಾಯಿತು. ನಮ್ಮಲ್ಲಿ ಹೈಕಮಾಂಡ್ ಸಂಸ್ಕøತಿ ಇದೆ. ನಾಲ್ಕು ಜನ ಕುಳಿತು ಚರ್ಚೆ ಮಾಡಬೇಕಾಗಿದೆ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ನನ್ನ ಯಾವುದೇ ಖಾತೆ ಬಿಟ್ಟುಕೊಡಲು ತಕರಾರಿಲ್ಲ. ಇದು ಎಲ್ಲರಿಗೂ ಅನ್ವಯವಾಗಲಿದೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಮೇಶ್‍ಕತ್ತಿ ಹೇಳಿಕೆಗೆ ತಿರುಗೇಟು:
ನಿನ್ನೆ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಮಾಜಿ ಸಚಿವ ಉಮೇಶ್‍ಕತ್ತಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಬೇರೆಯವರ ಸಂಪರ್ಕದಲ್ಲಿ ಏಕೆ ಇರುತ್ತಾರೆ ಎಂದು ಪ್ರಶ್ನಿಸಿದರು.
ನಿನ್ನೆ ನಡೆದ ಸಭೆಯಲ್ಲಿ ಯಾರಿಗೆ ಯಾವ ಖಾತೆ ಕೊಡಬೇಕೆಂಬ ಬಗ್ಗೆ ಚರ್ಚಿಸಿದ್ದಾರೋ ಗೊತ್ತಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಈಗಾಗಲೇ ಖಾತೆ ಹಂಚಿಕೆ ಪಟ್ಟಿ ಹೈಕಮಾಂಡ್ ಅಂಗಳಕ್ಕೆ ಹೋಗಿದೆ. ಎಲ್ಲರ ದೃಷ್ಟಿ ದೆಹಲಿಯತ್ತ ನೆಟ್ಟಿದೆ ಎಂದರು.