ಬೆಂಗಳೂರು, ಡಿ.27- ಕ್ಷುಲ್ಲಕ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೃತ್ತಿಯಲ್ಲಿ ಪೈಂಟರ್ ಆಗಿದ್ದ ದೊಡ್ಡಣ್ಣ ನಗರ ನಿವಾಸಿ ಜಗದೀಶ್ ಕುಮಾರ್ (28) ಕೊಲೆಯಾದ ದುರ್ದೈವಿ.
ಡಿ.25ರಂದು ಮಧ್ಯರಾತ್ರಿ 1.30ರ ಸಮಯದಲ್ಲಿ ದೊಡ್ಡಣ್ಣ ನಗರದ ಸೆವೆಂಥ್ ಡೇ ಚರ್ಚ್ ಮುಂಭಾಗದಲ್ಲಿ ಜಗದೀಶ್ಕುಮಾರ್ ಹಾಗೂ ಅರುಣ ಎಂಬುವರ ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿದೆ.
ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಅರುಣ ತನ್ನ ಸ್ನೇಹಿತರೊಂದಿಗೆ ಸೇರಿ ಕಬ್ಬಿಣದ ಪೈಪ್ನಿಂದ ಜಗದೀಶ್ಕುಮಾರ್ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದರು.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಜಗದೀಶ್ಕುಮಾರ್ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ, ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯರಾತ್ರಿ ಜಗದೀಶ್ಕುಮಾರ್ ಮೃತಪಟ್ಟಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಅರುಣ (21), ಶರತ್ (22), ಜಾನ್ಪೀಟರ್ (22) ಮತ್ತು ಅಪ್ಪು (22)ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.