ಮಾಜಿ ಕೇಂದ್ರ ಸಚಿವ ದಿ.ಆನಂತ್ ಕುಮಾರ್ ಅವರನ್ನು ನೆನೆದು ಕಂಬನಿ ಮಿಡಿದ ಕಾರ್ಯಕರ್ತರು

ಡಿ.27- ನಗರದ ಅಭಿವೃದ್ಧಿಯಲ್ಲಿ ಅಪಾರ ಕಾಳಜಿ ಹೊಂದಿದ್ದ ಒಬ್ಬ ಅದ್ಭುತ ನಾಯಕ ಅನಂತ್‍ಕುಮಾರ್. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಎಂದು ಬಿಜೆಪಿ ಕಾರ್ಯಕರ್ತರು ಅಪಾರ ದುಃಖ ವ್ಯಕ್ತಪಡಿಸಿದರು.

ಬಿಟಿಎಂ ಕ್ಷೇತ್ರದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ಮುಂದಾಗುತ್ತಿದ್ದ ಅನಂತ್‍ಕುಮಾರ್ ಅವರು ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಕಂಬಿನಿ ಮಿಡಿದರು.

ಕೋರಮಂಗಲ ಮತ್ತು ಬಿಟಿಎಂ ಲೇಔಟ್‍ನ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯಕರ್ತರು, ನಮ್ಮ ನೆಚ್ಚಿನ ನಾಯಕರನ್ನು ಸ್ಮರಿಸಿ, ನಗರದ ಅಭಿವೃದ್ಧಿ ಬಗ್ಗೆ ಅನಂತ್‍ಕುಮಾರ್ ಅಪಾರ ಕನಸು ಹೊಂದಿದ್ದರು ಎಂದು ಹೇಳಿದರು.

ಮೇಜರ್‍ಕಪೂರ್ ಮಾತನಾಡಿ, 17 ವರ್ಷಗಳಿಂದ ಅನಂತ್‍ಕುಮಾರ್ ಅವರು ನಮ್ಮ ಒಡನಾಡಿಯಾಗಿದ್ದರು. ನಮ್ಮ ಲೇಔಟ್‍ನಲ್ಲಿದ್ದ ಡಿಫೆನ್ಸ್ ಲ್ಯಾಂಡಿನ ಸಮಸ್ಯೆ ಬಗ್ಗೆ ಅವರ ಮೊರೆ ಹೋದಾಗ ತಮ್ಮನ್ನು ದೆಹಲಿಗೆ ಕರೆಸಿಕೊಂಡು ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಖುದ್ದು ಭೇಟಿ ಮಾಡಿಸಿದ್ದರು. ನಂತರ ಕೇಂದ್ರ ಸಚಿವರೇ ಬೆಂಗಳೂರಿಗೆ ಬಂದು ಪರಿಹಾರ ಒದಗಿಸಿದ್ದರು ಎಂದು ಹೇಳಿದರು.

ಬಿಬಿಎಂಪಿ ಸದಸ್ಯೆ ಸರಳಾ ಮಹೇಶ್ ಬಾಬು ಮಾತನಾಡಿ, ನಗರದ ಎಲ್ಲಾ ಸಮಸ್ಯೆಗಳಿಗೂ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ಪಕ್ಷ ಭೇದವಿಲ್ಲದೆ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದರು ಎಂದರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್‍ಕುಮಾರ್, ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸುದರ್ಶನ್, ಆರ್‍ಎಸ್‍ಎಸ್ ಮುಖಂಡ ವಿ.ಮಂಜು, ಮುಖಂಡ ಲಲ್ಲೇಶ್ ರೆಡ್ಡಿ ಮತ್ತಿತರರು ಸಭೆಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ