ಬೆಂಗಳೂರು, ಡಿ.27- ಎಕ್ಸೈಡ್ ಲೈಫ್ ಇನ್ಷುರೆನ್ಸ್ನಿಂದ ನಡೆಸಲಾದ ಸಮೀಕ್ಷೆಯಲ್ಲಿ ಹಣಕಾಸಿನ ಹೊಣೆಗಾರಿಕೆ ಕುರಿತು ಭಾರತೀಯರ ನಡುವೆ ಸ್ಪಷ್ಟ ಅಂತರ ಕಂಡು ಬಂದಿದೆ.
ಸಮೀಕ್ಷೆಯಲ್ಲಿ ಒಟ್ಟಾರೆ ಭಾರತೀಯರ ಪೈಕಿ ಶೇ.30ರಷ್ಟು ಜನರಿಗೆ ತಮಗೆ ಎಷ್ಟು ಪ್ರಮಾಣದ ಜೀವ ವಿಮೆ ಅಗತ್ಯವಿದೆ ಎಂಬ ಮಾಹಿತಿಯೇ ಇಲ್ಲ. ಪ್ರತಿ ಮೂವರಲ್ಲಿ ಒಬ್ಬರು ಭಾರತೀಯರು ತಮ್ಮ ಹಣಕಾಸಿನ ವಹಿವಾಟಿನ ಕುರಿತು ದಾಖಲೆಯನ್ನೇ ಇಡುವುದಿಲ್ಲ ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಸಮೀಕ್ಷೆ ನಡೆಸಿರುವ ಕಂಪೆನಿ ಭಾರತೀಯರಿಗೆ ಹಣಕಾಸಿನ ನಿರ್ವಹಣೆಗೆ ಅಗತ್ಯ ನೆರವು , ಗುಣಮಟ್ಟದ ಜೀವನ ನಿರ್ವಹಣೆ ಹಾಗೂ ಗ್ರಾಹಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಒತ್ತು ನೀಡಿದೆ.
ಈ ಡಿಜಿಟಲ್ ಸಮೀಕ್ಷೆಯಲ್ಲಿ ಮೆಟ್ರೋ ಮತ್ತು ಎರಡನೆ ಹಂತದ ಸುಮಾರು 12 ನಗರಗಳ ಜನರು ಪಾಲ್ಗೊಂಡಿದ್ದು , ಸಮೀಕ್ಷೆಗೆ ಸ್ಪಂದಿಸಿದ ಶೇ.72ರಷ್ಟು ಭಾರತೀಯರಿಗೆ ವಿಲ್ ಕುರಿತು ಕೇಳಿದ ಪ್ರಶ್ನೆಗಳಿಗೆ ಮಾಡಿಸಿಲ್ಲ ಎಂಬ ಉತ್ತರ ದೊರಕಿದೆ.
ಲೈಫ್ ಇನ್ಷುರೆನ್ಸ್ ಎಂಬುದು ಜೀವನದ ಗುರಿ ಸಾಧನೆಗೆ ಇರುವ ಮಾರ್ಗೋಪಾಯವಾಗಲಿದ್ದು , ಬಹುತೇಕ ಮನೆ ನಿರ್ಮಿಸಲು (ಶೇ.43) ಮಕ್ಕಳ ಶಿಕ್ಷಣ (ಶೇ.38) , ನಿವೃತ್ತಿ ಬದುಕು (ಶೇ.49), ಕಾನೂನು ಬದ್ಧ ಅಧಿಕಾರ (ಶೇ.50) ಅಗತ್ಯಗಳಿಗೆ ಬಳಕೆಯಾಗುತ್ತಿದೆ.
ಈ ಸಮೀಕ್ಷೆಯಿಂದ ಜೀವನದ ಗುರಿ ಸಾಧನೆಗೆ ಯಾವ ಹಣಕಾಸು ಸಾಧನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕುಟುಂಬದ ಭದ್ರತೆಗೆ ಕೈಗೊಂಡಿರುವ ಕ್ರಮಗಳೇನು? ಎಷ್ಟು ಪ್ರಮಾಣದ ಜೀವ ವಿಮೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಅಭಿವೃದ್ಧಿ ದೇಶಗಳಿಗೆ ಹೋಲಿಸಿದರೆ ಜೀವ ವಿಮಾ ವ್ಯವಸ್ಥೆಯು ಭಾರತದಲ್ಲಿ ಶೇ.3ಕ್ಕಿಂತಲೂ ಕಡಿಮೆ ಇದೆ ಎಂದು ಕಂಪೆನಿಯ ನಿರ್ದೇಶಕ ಮೋಹಿತ್ ಗೋಯಲ್ ತಿಳಿಸಿದ್ದಾರೆ.
ಹಣಕಾಸು ನಿರ್ವಹಣೆ ಎಂಬುದು ಒಂದು ಸಂಕೀರ್ಣವಾದ ಯಜ್ಞ. ಹಣಕಾಸು ಹೊಣೆಗಾರಿಕೆ ಮತ್ತು ನಿರ್ವಹಣೆ ಚಿಂತನೆಯೇ ವಿಮೆ ಭದ್ರತೆ ಎಂದು ಅಭಿಪ್ರಾಯಪಟ್ಟರು.