ಬಿಬಿಎಂಪಿಯು ಅಭಿವೃದ್ಧಿ ಕಾಮಗಾರಿಗಳಿಗೆ ಶೇ 48ರಷ್ಟು ಅನುದಾನ ವೆಚ್ಚ ಮಾಡಲಾಗಿದೆ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್

ಬೆಂಗಳೂರು, ಡಿ.27- ಪಾಲಿಕೆ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.48ರಷ್ಟು ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಬಿಬಿಎಂಪಿ ಸಭೆಯಲ್ಲಿಂದು ಅಂಕಿ-ಅಂಶಗಳ ಸಮೇತ ವಿವರ ನೀಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.

ಬಿಬಿಎಂಪಿಯ ಅನುದಾನದಲ್ಲಿ ಶೇ.5ರಷ್ಟು ಕೂಡ ವೆಚ್ಚವಾಗಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಶಿವರಾಜ್, ಬಿಜೆಪಿ ಸದಸ್ಯರು ನೂರಾರು ಕೋಟಿ ರೂ. ಅನುದಾನ ಪಡೆದು ತಮ್ಮ ವಾರ್ಡ್‍ಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಆದರೂ ಅನಗತ್ಯ ಆರೋಪಗಳನ್ನು ಮಾಡುತ್ತಿರುವ ಕ್ರಮ ಸಮಂಜಸವಲ್ಲ ಎಂದರು.

ಪ್ರಸಕ್ತ ಸಾಲಿನಲ್ಲಿ ಶೇ.48ರಷ್ಟು ಅನುದಾನ ವೆಚ್ಚ ಮಾಡಲಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಾಲಿಕೆಗೆ 7500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಬಿಬಿಎಂಪಿಗೆ 8300 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ.

ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 10,332 ಕೋಟಿ ರೂ. ಘೋಷಿಸಲಾಗಿದೆ. ಈಗಾಗಲೇ 4992 ಕೋಟಿ ರೂ. ಅಂದರೆ ಶೇ.48ರಷ್ಟು ವೆಚ್ಚ ಮಾಡಲಾಗಿದೆ. ಇನ್ನುಳಿದಂತೆ ಹಲವೆಡೆ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ವಾರ್ಡ್ ಮಟ್ಟದ ಕಾಮಗಾರಿಗಳಿಗೆ 1053 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ನಿಮ್ಮ ಅಂದರೆ ಬಿಜೆಪಿ ಅವಧಿಯಲ್ಲಿ ಮಾಡಿದ ಸಾಲ ಮತ್ತು ಬಡ್ಡಿ ಕಟ್ಟಲು 479 ಕೋಟಿ ಅನುದಾನ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ 2020 ಕೋಟಿ ರೂ. ಪಾವತಿ ಮಾಡಿದೆ. ಕೇಂದ್ರ ಸರ್ಕಾರದಿಂದ ಬಂದಿರುವ 193 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 27.02.2018ಕ್ಕೆ ಅನ್ವಯವಾಗುವಂತೆ ಸಮಾಜ ಕಲ್ಯಾಣ ಕೆಲಸಗಳಿಗೆ 632 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ತ್ಯಾಜ್ಯ ವಿಲೇವಾರಿಗೆ 453 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅಂಕಿ-ಅಂಶಗಳ ವಿವರಗಳ ಮಾಸಿಕ ಸಭೆಯಲ್ಲಿ ಶಿವರಾಜ್ ನೀಡಿದರು.

ಸ್ಥಾಯಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿಲ್ಲ. 460 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದೆ. ಸ್ಥಾಯಿ ಸಮಿತಿಗಳ ಅಸ್ತಿತ್ವ ಸಂಭಾವ್ಯತೆಯನ್ನು ಮುಂದಿಟ್ಟುಕೊಂಡು ಯೋಜನೆಗಳಿಗೆ ಚಾಲನೆ ನೀಡುವಂತೆ ಸಭೆಯಲ್ಲಿ ಮೇಯರ್ ಗಂಗಾಂಬಿಕೆ ಸಲಹೆ ನೀಡಿದರು.

ಉಮೇಶ್‍ಶೆಟ್ಟಿ ಅವರು ತಮ್ಮ ವಾರ್ಡ್‍ನಲ್ಲಿ ವೈ-ಫೈ ಅಳವಡಿಸಿದ್ದಾರೆ. ಅಲ್ಲದೆ, ಹಲವು ಆಧುನಿಕ ಸೌಲಭ್ಯಗಳನ್ನು ಮಾಡಿದ್ದಾರೆ. ಅದರ ಬಗ್ಗೆನಮಗೆ ಅಸೂಯೆ ಇಲ್ಲ. ಇದಕ್ಕೆಲ್ಲ ಅನುದಾನ ನಾವೇ ಅಲ್ಲವೆ ಕೊಟ್ಟಿದ್ದು. ನನ್ನ ವಾರ್ಡ್‍ಗೆ 65 ಕೋಟಿ ಅನುದಾನ ಬಂದಿದೆ. ಮೇಯರ್ ವಾರ್ಡ್‍ಗೆ 65 ಕೋಟಿ, ಸಂಪತ್‍ರಾಜ್ ಅವರ ವಾರ್ಡ್‍ಗೆ 87 ಕೋಟಿ, ಮಾಜಿ ಮೇಯರ್ ಪದ್ಮಾವತಿ ಅವರ ವಾರ್ಡ್‍ಗೆ 64 ಕೋಟಿ, ಜೆಡಿಎಸ್ ನಾಯಕರಾದ ನೇತ್ರಾ ನಾರಾಯಣ್ ವಾರ್ಡ್‍ಗೆ 63 ಕೋಟಿ, ಮಾಜಿ ಉಪಮಹಾಪೌರ ಆನಂದ್ ಅವರ ವಾರ್ಡ್‍ಗೆ 67 ಕೋಟಿ. ಆದರೆ, ಬಿಜೆಪಿ ಸದಸ್ಯರಾದ ತೇಜಸ್ವಿನಿ ಅವರ ವಾರ್ಡ್‍ಗೆ 165 ಕೋಟಿ, ಲೋಕೇಶ್ ಅವರ ವಾರ್ಡ್‍ಗೆ 135 ಕೋಟಿ, ಪದ್ಮನಾಭರೆಡ್ಡಿ ವಾರ್ಡ್‍ಗೆ 72 ಕೋಟಿ ಹೀಗೆ ನಿಮ್ಮ ವಾರ್ಡ್‍ಗಳಿಗೆ ಹೆಚ್ಚು ಅನುದಾನ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಶೇ.5ರಷ್ಟೂ ಅನುದಾನ ವೆಚ್ಚವಾಗಿಲ್ಲ ಎಂದು ಹೇಳುತ್ತಿರುವುದು ಯಾವ ನ್ಯಾಯ. ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಪಕ್ಷಾತೀತವಾಗಿ ಅನುದಾನ ಹಂಚಿಕೆ ಮಾಡಿದ್ದೇವೆ. ಆರೋಪ ಮಾಡುವ ಮೊದಲು ವಿಪಕ್ಷ ನಾಯಕರು ಅಂಕಿ-ಅಂಶಗಳ ಕಡೆ ಗಮನ ನೀಡಿ ಎಂದು ಹೇಳಿದರು.
3100 ಕೋಟಿ ತೆರಿಗೆ ಸಂಗ್ರಹದ ಗುರಿ: ಪ್ರಸಕ್ತ ಸಾಲಿನಲ್ಲಿ 3100 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, 1,14,000 ಜನರಿಂದ 2186 ಕೋಟಿ ದಾಖಲೆಯ ತೆರಿಗೆ ಸಂಗ್ರಹ ಮಾಡಲಾಗಿದೆ. ಇನ್ನು ಮೂರು ತಿಂಗಳೊಳಗಾಗಿ ಉಳಿದ ತೆರಿಗೆ ಸಂಗ್ರಹಿಸಿ ದಾಖಲೆ ಮಾಡಲಾಗುವುದು. ಶೇ.100ಕ್ಕೆ ನೂರರಷ್ಟು ತೆರಿಗೆ ಸಂಗ್ರಹಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಕ್ರಮ ಪ್ರಶಂಸನೀಯ ಎಂದು ಶಿವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ