ನಗರ ಪೊಲೀಸ್ ಘಟಕಕ್ಕೆ 911 ದ್ವಿಚಕ್ರ ವಾಹನಗಳನ್ನು ಹೊಸ ವರ್ಷದ ಕೊಡುಗೆಯಾಗಿ ನೀಡಿದ ಸರ್ಕಾರ

ಬೆಂಗಳೂರು, ಡಿ.26- ಹೊಸ ವರ್ಷದ ಕೊಡುಗೆಯಾಗಿ ಸರ್ಕಾರ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ಒಟ್ಟು 911 ದ್ವಿಚಕ್ರ ವಾಹನಗಳನ್ನು ನೀಡಿದೆ.
ಬೆಂಗಳೂರು ನಗರ ಕ್ಷಿಪ್ರವಾಗಿ ಬೆಳೆಯುತ್ತಿದ್ದು , ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಠಾಣಾ ಗಸ್ತು ಕರ್ತವ್ಯ ಮತ್ತು ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು , ಸಂಚಾರ ವಿಭಾಗದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅರಿವು ಮೂಡಿಸಲು, ಜನರ ಕರೆಗಳಿಗೆ ಕೂಡಲೇ ಸ್ಪಂದಿಸಲು ಪ್ರಸ್ತುತ ಇರುವ ಪೊಲೀಸ್ ಗಸ್ತು ವಾಹನ ಹೊಯ್ಸಳದ ಜತೆಗೆ ಈ ವಾಹನಗಳನ್ನು ನೀಡಿದೆ.
ಆಯಾ ಠಾಣೆಗಳ ವ್ಯಾಪ್ತಿಗಳಲ್ಲಿ ತುರ್ತಾಗಿ ಸ್ಪಂದಿಸಲು ಹಾಗೂ ಮುಖ್ಯವಾಗಿ ಸರಗಳ್ಳರನ್ನು ಹಿಂಬಾಲಿಸಲು ದ್ವಿಚಕ್ರ ವಾಹನಗಳಲ್ಲಿ ಗಸ್ತು ಮಾಡಲು ಅತ್ಯವಶ್ಯಕವಾಗಿದ್ದು , ಈ ಬಗ್ಗೆ ನಗರ ಪೊಲೀಸರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 7,11,60,465 ರೂ.ಗಳಲ್ಲಿ ವಾಹನಗಳನ್ನು ಖರೀದಿಸಲು ಮನವಿ ಮಾಡಿದ್ದರು.

ಸರ್ಕಾರ ಅದನ್ನು ಅನುಮೋದಿಸಿ ಹಣವನ್ನು ಮಂಜೂರು ಮಾಡಿದ್ದು ಜಿಇಎಂ ಪೊರ್ಟಲ್‍ನಲ್ಲಿ ಖರೀದಿಸಲು ಸರ್ಕಾರ ಅನುಮತಿ ನೀಡಿದು, ಇದನ್ನು ಕಾರ್ಯ ರೂಪಕ್ಕೆ ತರಲು ಒಟ್ಟು 911 ಟಿವಿಎಸ್ ಅಪಾಚಿ ವಾಹನಗಳನ್ನು ಖರೀದಿಸಲಾಗಿದೆ.

ಈ ವಾಹನಗಳನ್ನು ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆಯ 108 ಠಾಣೆಗಳಿಗೆ, ಸಂಚಾರಿ ಭಾಗದ 44 ಠಾಣೆಗಳಿಗೆ , 2 ಮಹಿಳಾ ಪೊಲೀಸ್ ಠಾಣೆಗಳಿಗೆ ಹಾಗೂ ನಗರದ ವಿವಿಧ ಘಟಕಗಳಾದ ಗುಪ್ತಚರ ವಿಭಾಗ, ಅತಿ ಗಣ್ಯ ವ್ಯಕ್ತಿಗಳ ವಿಭಾಗ, ಕಂಟ್ರೋಲ್ ರೂಂ , ಸಿಎಆರ್ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.
ಪ್ರಸ್ತುತವಿರುವ 272 ಹೊಯ್ಸಳ ವಾಹನಗಳೊಂದಿಗೆ ನಗರ ಪೊಲೀಸ್ ವ್ಯವಸ್ಥೆಗೆ ಒಟ್ಟು 911 ದ್ವಿಚಕ್ರ ವಾಹನಗಳು ಸೇರ್ಪಡೆಗೊಳಿಸಿ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.

ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗಗಳಿಗೆ ಸರಾಸರಿ 75ರಿಂದ 80 ವಾಹನಗಳು ಹಗಲಿರುಳು ಪೊಲೀಸರ ಕರ್ತವ್ಯಕ್ಕೆ ಲಭ್ಯವಾಗಲಿವೆ. ಇವುಗಳನ್ನು ಠಾಣೆಯಲ್ಲಿರುವ ಕಾನ್‍ಸ್ಟೇಬಲ್‍ರಿಂದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿಗಳು ಉಪಯೋಗಿಸಬಹುದಾಗಿದೆ.

ಈ ವಾಹನಗಳು ಹೊಸ ವರ್ಷದ ಕೊಡುಗೆಯಾಗಿ ಸಾರ್ವಜನಿಕರ ಸೇವೆಗಾಗಿ ಇಂದಿನಿಂದಲೇ ಪೊಲೀಸರಿಗೆ ಲಭ್ಯವಾಗಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ