ಬೆಂಗಳೂರು,ಡಿ.26- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ನಲ್ಲಿ ಘೋಷಿಸಲಾದ ಯೋಜನೆಗಳ ಪೈಕಿ ಅನುಷ್ಠಾನಗೊಂಡಿರುವುದು ಶೇ.5ರಷ್ಟು ಮಾತ್ರ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಬಜೆಟ್ನಲ್ಲಿ 10,129 ಕೋಟಿ ರೂ.ನಷ್ಟು ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಆದರೆ ಇವುಗಳಲ್ಲಿ ಅನುಷ್ಠಾನಗೊಂಡಿರುವುದು ಮಾತ್ರ ಶೇ.5ರಷ್ಟು ಮಾತ್ರ. ಇದು ಬಿಬಿಎಂಪಿಯ ಆಡಳಿತ ಪಕ್ಷಗಳ ಕಾರ್ಯವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಅಭಿವೃದ್ಧಿಯ ಹೆಸರಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದ್ದು, ಪ್ರತಿಯೊಂದರಲ್ಲೂ ಪರ್ಸಂಟೇಜ್ ವ್ಯವಹಾರ ನಡೆಸುತ್ತಿದೆ. ಬಾಯಲ್ಲಿ ಮಾತ್ರ ಅಭಿವೃದ್ಧಿ ಮಂತ್ರ ಜಪಿಸುತ್ತ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸದೇ ಜನರ ಕಣ್ಣಿಗೆ ಮಣೆರೆಚುತ್ತಿದೆ ಎಂದು ಗುಡುಗಿದರು.
ಮೇಯರ್ ಮತ್ತು ಆಯುಕ್ತರ ನಿವಾಸಕ್ಕೆ 5 ಕೋಟಿ ರೂ. ಮೀಸಲಿರಿಸಿದ್ದರು. ಅದು ಇನ್ನೂ ಜಾರಿಗೆ ಬಂದಿಲ್ಲ. ಕೌಶಲ್ಯ ತರಬೇತಿಯ ಭರವಸೆಯೂ ಹುಸಿಯಾಗಿದೆ. ನಿವೃತ್ತ ನೌಕರರ ಪಿಂಚಣಿ ಯೋಜನೆಗೆ ಆಧಾರ್ ಜೋಡಣೆ ಕಾರ್ಯಕ್ರಮ ಇನ್ನೂ ಆರಂಭಗೊಂಡಿಲ್ಲ. ಶುದ್ಧ ಕುಡಿಯುವ ನೀರು ಸೇರಿದಂತೆ ಬಜೆಟ್ನಲ್ಲಿ ಘೋಷಿತವಾದ ಅನೇಕ ಯೋಜನೆಗಳು ಅನುಷ್ಠಾನಗೊಂಡಿಲ್ಲ ಎಂದರು.
ಮೇಯರ್ಗೆ ಬೆಳ್ಳಿ ಕೀ ನೀಡಿದ್ದು, ಸದಸ್ಯರಿಗೆ ಟ್ಯಾಬ್ ವಿತರಣೆ ಇವುಗಳೇ ಇವರ ಸಾಧನೆ. ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡ ಮೇಲಷ್ಟೇ ಎಚ್ಚೆತ್ತುಕೊಳ್ಳುವುದು ಇವರ ಜಾಯಮಾನ ಎಂದು ಕಿಡಿಕಾರಿದ್ದಾರೆ.
ಇವರ ಬಂಡವಾಳ ಬಯಲಾಗಬೇಕಾದರೆ ಯೋಜನೆಗಳ ಅನುಷ್ಠಾನ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.