ಬೆಂಗಳೂರು, ಡಿ.26- ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಗರೀಂ ಅಭಿಯಾನ ಆರಂಭಿಸಿರುವುದಾಗಿ ಅಭಿಯಾನದ ಮುಖಂಡ ಆಸೀಫ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂಬೈನಿಂದ ದೆಹಲಿವರೆಗೂ ಯಾತ್ರೆ ನಡೆಸುವ ಮೂಲಕ ಅಭಿಯಾನ ಕೈಗೊಂಡಿದ್ದು, ಇದೇ 22ರಿಂದ ಮುಂಬೈನಿಂದ ಹೊರಟಿರುವ ಯಾತ್ರೆ ಫೆ.22ಕ್ಕೆ ದೆಹಲಿಯಲ್ಲಿ ಸಮಾರೋಪಗೊಳ್ಳಲಿದೆ.
ಮುಂಬೈನಿಂದ ದೆಹಲಿವರೆಗಿನ ಹತ್ತುಸಾವಿರ ಕಿ.ಮೀ. ದೂರದವರೆಗೆ ಯಾತ್ರೆ ತೆರಳಲಿದ್ದು, 24 ರಾಜ್ಯಗಳು, 200 ಜಿಲ್ಲೆಗಳನ್ನು ಹಾದು ಹೋಗಲಿದೆ. ಈ ಅಭಿಯಾನದ ಮುಖ್ಯ ಉದ್ದೇಶದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸುವುದೇ ಆಗಿದೆ.
ಹೆಣ್ಣು ಮಕ್ಕಳು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಎದುರಿಸುವ ದೌರ್ಜನ್ಯದ ವಿರುದ್ಧ ತಲೆ ಎತ್ತಿದರೂ ಎಷ್ಟೋ ವೇಳೆ ನ್ಯಾಯ ಸಿಗುತ್ತಿಲ್ಲ. ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲೆಗೆ ತೊಡಕಿದೆ. ಎಫ್ಐಆರ್ ದಾಖಲಾದರೂ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ 20ರಿಂದ 50 ವರ್ಷ ತೆಗೆದುಕೊಂಡ ನಿರ್ದಶನಗಳಿವೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳನ್ನು ಶೀಘ್ರ ವಿಚಾರಣೆ ನಡೆಸಿ ತೀರ್ಪು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಜತೆಗೆ ದೌರ್ಜನ್ಯಗಳ ಕುರಿತಂತೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಹಾಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.