ಬೆಂಗಳೂರು,ಡಿ.26-ಸ್ಟಾರ್ಟ್ ಆಫ್ ಕಂಪನಿ, ಯುವ ಉದ್ಯಮಶೀಲತೆ, ಉದ್ಯೋಗಸೃಷ್ಟಿ ಹಾಗೂ ಹೊಸ ತಂತ್ರಜ್ಞಾನ ಮತ್ತು ನೂತನ ಅವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.
ಬೆಳಗಾವಿಯ ಉದ್ಯಮ ಭಾಗ್ ಕೈಗಾರಿಕಾ ಪ್ರದೇಶಕ್ಕೆ ಸಾರಿಗೆ ಸಚಿವ ಡಿ.ಸಿ.ತಮಣ್ಣ ಹಾಗೂ ಕಾಸಿಯಾ ಅಧ್ಯಕ್ಷ ಬಸವರಾಜ್.ಎಸ್ ಜವಳಿ, ಬೆಳಗಾಂ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಎಂಎಸ್‍ಎಂಇಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುವುದು. ಬೆಳಗಾವಿಯಲ್ಲಿ ಕೈಗಾರಿಕಾ ಎಸ್ಟೇಟ್‍ಗಳನ್ನು ವಿಸ್ತರಿಸುವ ಬಗ್ಗೆ ಯೋಜನಾ ವರದಿಯನ್ನು ತಯಾರಿಸುವಂತೆ ಸಚಿವರು ಕೋರಿದರು.
ಇದರ ಯೋಜನಾ ವೆಚ್ಚದಲ್ಲಿ ಶೇ.50ರಷ್ಟನ್ನು ಕೈಗಾರಿಕಾ ಇಲಾಖೆ ವತಿಯಿಂದ ಬೆಳಗಾವಿ ನಗರ ನಿಗಮದಿಂದ ನೀಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಕರಣ್ ಜವಳಿ, ಸುದೀರ್ ಕೋಲಿ, ಸಮೀಕ್ಷಾ ಖತವ್, ಪ್ರಥ್ಮೇಶ್, ಅಬ್ಜಲ್ ಪ್ರಿಜ್ಡೆ, ಪ್ರಫುಲ್ ಚೆಲಾಡ್, ದಿಗ್ವಿಜಯ ಸಿಡ್ನಾಲ್, ಅಭಿಷೇಕ್ ಜವಳಿ, ಸುಜೀತ್ ಮುಲ್ಗುಂಡ್, ಅಭಿನಂದನ್ ಪಂಡಿತ್ ಹಾಗೂ ಬಿಡಿಎಸ್‍ಎಸ್‍ಐನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.