ಬೆಂಗಳೂರು,ಡಿ.26-ಡಾ.ಶಿವರಾಮ ಕಾರಂತ್ ಬಡಾವಣೆ ನಿರ್ಮಾಣ ಮಾಡಲು 17 ಗ್ರಾಮಗಳಿಗೆ ಸೇರಿದ 3546 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿ ಐದಾರು ವರ್ಷಗಳು ಕಳೆದರೂ ಇದುವರೆಗೂ ಇನ್ನು ಬಡಾವಣೆ ನಿರ್ಮಾಣವಾಗಿಲ್ಲ. ಇದರಲ್ಲಿ ಅವ್ಯವಹಾರ ನಡೆದಿದ್ದು ಕೂಡಲೇ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ತನಿಖೆ ನಡೆಸದೇ ಹೋದರೆ ಜ.8ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಡಾ.ಶಿವರಾಮ ಕಾರಂತ್ ಬಡಾವಣೆ ನಿರ್ಮಾಣ ಮಾಡಲು 17 ಗ್ರಾಮಗಳಿಗೆ ಸೇರಿದ 3546.12 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಅಧಿಸೂಚನೆ ಹೊರಡಿಸಿದೆ. ಆದರೆ ಇದುವರೆಗೆ ಬಡಾವಣೆ ನಿರ್ಮಾಣವಾಗಿಲ್ಲ. 142 ಭೂ ಮಾಲೀಕರು ಉಚ್ಛ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದು ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಎ.ಎಸ್.ಬೂಪಣ್ಣ ಅವರು ಸರ್ಕಾರದ ಅಧಿಸೂಚನೆಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ವಿರುದ್ದ ಬಿಡಿಎ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ಆದರೆ 3546 ಎಕರೆ 12 ಗುಂಟೆ ಜಮೀನನಲ್ಲಿ 1300 ಎಕರೆಗಳ ಜಮೀನು ಮಾಲೀಕರಿಗೆ ಎನ್ಒಸಿ ಕೊಟ್ಟಿರುವುದನ್ನು ಸುಪ್ರೀಂಕೋರ್ಟ್ಗೆ ತಿಳಿಸದೆ ಮರೆಮಾಚಿದೆ ಎಂದು ದೂರಿದರು.
ಒಟ್ಟಾರೆ ಬಡಾವಣೆ ನಿರ್ಮಾಣ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತನಿಖೆ ನಡೆಸಬೇಕು. ಬಿಡಿಎ ಕ್ರಮ ವಿರೋಧಿಸಿ ರೈತರೊಂದಿಗೆ ಮುಖ್ಯಮಂತ್ರಿಯವರನ್ನು ಸದ್ಯದಲ್ಲೇ ಭೇಟಿ ಮಾಡುತ್ತೇನೆ ಹಾಗೂ ಸರ್ಕಾರದ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.