ಬೆಂಗಳೂರು,ಡಿ.26- ಸಚಿವ ಸ್ಥಾನ ಸಿಗದೆ ಪಕ್ಷ ಹಾಗೂ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದ ಅತೃಪ್ತ ಶಾಸಕರನ್ನು ಮನವೊಲಿಸುವ ಕಸರತ್ತು ಇಂದೂ ಕೂಡ ಮುಂದುವರೆದಿದೆ.
ಶಾಸಕರಾದ ರಮೇಶ್ ಜಾರಕಿಹೊಳಿ ಹೊರತು ಪಡಿಸಿ ಬಂಡಾಯ ಸಾರಿದ್ದ ಬಹುತೇಕ ಭಿನ್ನಮತೀಯರು ಹೈಕಮಾಂಡ್ ಮಧ್ಯಪ್ರವೇಶದಿಂದಾಗಿ ಮೆತ್ತಗಾಗಿದ್ದಾರೆ.
ಯಾವುದೇ ಕಾರಣಕ್ಕಾಗಿ ಪಕ್ಷ ಬಿಡುವುದಾಗಲಿ ಇಲ್ಲವೇ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದೆಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮತ್ತು ಸಂಧಾನಕಾರರಾಗಿ ಆಗಮಿಸಿರುವ ಎಂ.ಸಿ.ವೇಣುಗೋಪಾಲ್ ನಡೆಸಿದ ಸರಣಿ ಸಭೆಗಳು ಸದ್ಯಕ್ಕೆ ಫಲ ನೀಡಿದೆ.
ಇಂದೂ ಕೂಡಾ ರಾಮಲಿಂಗಾರೆಡ್ಡಿ ಬೆಂಬಲಿಗರು ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿ ತಮ್ಮ ನಾಯಕನಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯಿಟ್ಟರು.
ರೆಡ್ಡಿ ಬೆಂಬಲಿಗರ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ ವೇಣುಗೋಪಾಲ್ ಲೋಕಸಭೆ ಚುನಾವಣೆ ನಂತರ ರಾಮಲಿಂಗಾರೆಡ್ಡಿಯವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದರು.
ಅವರ ಸಾಮಥ್ರ್ಯವನ್ನು ಗುರುತಿಸಿಯೇ ಪಕ್ಷ ಹಿಂದೇ ಅತ್ಯಂತ ಪ್ರಬಲವಾದ ಗೃಹ ಖಾತೆಯನ್ನು ನೀಡಿತ್ತು. ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ನಾವು ಮೈತ್ರಿ ಪಕ್ಷಗಳಿಗೂ ಸ್ಥಾನಗಳನ್ನು ತ್ಯಾಗ ಮಾಡಬೇಕಾದ ಅನಿವಾರ್ಯತೆ ಇರುತ್ತದೆ.
ಕಾಂಗ್ರೆಸ್ ರಾಜ್ಯದಲ್ಲಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿದಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ರಾಮಲಿಂಗಾರೆಡ್ಡಿಯವರಂತಹ ಹಿರಿಯರೇ ಹೀಗೆ ಮಾಡಿದರೆ ಹೇಗೆ ಎಂಬ ಪ್ರಶ್ನೆ ಮುಂದಿಟ್ಟರು.
ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಡ ಹಾಕಬಾರದು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಯಾರ ಇಷ್ಟವೋ ಕಷ್ಟವೋ ರಾಹುಲ್ ಗಾಂಧಿಯವರ ಸೂಚನೆಯಂತೆಯೇ ಸರ್ಕಾರ ರಚನೆಯಾಗಿದೆ. ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಯಾರೊಬ್ಬರೂ ವಿವಾದ ಮಾಡಬಾರದು ಎಂದು ಮನವಿ ಮಾಡಿದರು.
ವೇಣುಗೋಪಾಲ್ ಅವರ ಸಲಹೆಗೆ ಒಪ್ಪಿದ ರಾಮಲಿಂಗಾರೆಡ್ಡಿ ಬೆಂಬಲಿಗರು ನಗು ಮೊಗದಿಂದಲೇ ಹೊರ ನಡೆದರು.
ಇನ್ನು ಬಿ.ಸಿ.ಪಾಟೀಲ್, ಭೀಮಾನಾಯ್ಕ್,, ಡಾ.ಸುಧಾಕರ್ ಸೇರಿದಂತೆ ಹಲವು ಅತೃಪ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ವೇಣುಗೋಪಾಲ್ ಅವರು ಪ್ರಸ್ತುತ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಬಹುತೇಕರ ಅಸಮಾಧಾನ ತಣ್ಣಗಾದಂತೆ ಕಂಡು ಬಂದಿತು.
ತಣ್ಣಗಾದ ರಮೇಶ್ ಜಾರಕಿಹೊಳಿ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಾರ ಕೈಗೂ ಸಿಗದೆ ಬೆಳಗಾವಿ ಸೇರಿಕೊಂಡಿದ್ದು, ಇವರೊಂದಿಗೆ ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ದೂರವಾಣಿ ಮುಖಾಂತರ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ. ನೀವು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದೇ ಪಕ್ಷದೊಂದಿಗೆ ಕೈ ಜೋಡಿಸಿ. ಇದರಿಂದ ಪಕ್ಷ ಹಾಗೂ ನಿಮಗೂ ಲಾಭವಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವತ್ತ ಗಮನಹರಿಸಿ. ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನ ಮಾನ ಖಚಿತ ಎಂದು ತಿಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಯವರೂ ಕೂಡಾ ರಾಹುಲ್ ಅವರ ಮಾತಿಗೆ ಒಪ್ಪಿ ಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಮೇಲ್ನೋಟಕ್ಕೆ ಎಲ್ಲವೂ ಸರಿಹೋದಂತೆ ಕಂಡುಬರುತ್ತಿದ್ದರೂ, ಒಳ ಬೇಗುದಿಗಳು ಬೂದಿ ಮುಚ್ಚಿದ ಕೆಂಡದಂತಿದೆ.