ಬೆಂಗಳೂರು, ಡಿ.26- ಸಂಸದೆ ಶೋಭಾಕರಂದ್ಲಾಜೆ ಅವರು ಇಂಧನ ಸಚಿವರಾಗಿದ್ದ ವೇಳೆ ಬೆಸ್ಕಾಂನಲ್ಲಿ 90 ಕೋಟಿ ರೂ. ಹಗರಣ ನಡೆಸಿದ್ದಾರೆ ಎಂದು ನೀತಿ ಟ್ರಸ್ಟ್ ಅಧ್ಯಕ್ಷ ಜಯನ್ ಆರೋಪಿಸಿದ್ದಾರೆ.
2012-13ನೇ ಸಾಲಿನಲ್ಲಿ ಎಬಿ-ಎಲ್ಟಿ, ಎಬಿ-ಎಚ್ಟಿ, ಬಂಜ್ ಕೇಬಲ್ ಕಾಮಗಾರಿಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸಲಾಗಿದೆ.
ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್, ಕನೆಕ್ಟರ್ ಸ್ವಿಚ್ ಖರೀದಿಯಲ್ಲೂ ಭಾರೀ ಗೋಲ್ ಮಾಲ್ ನಡೆದಿದೆ ಎಂದು ದೂರಿದ್ದಾರೆ.
ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಒಂದರ ಮಾರುಕಟ್ಟೆ ದರ 800 ರೂ. , ಬೆಸ್ಕಾಂ ನಿರ್ಧರಿಸಿದ ದರ 1987ರೂ. ಆದರೆ ಖರೀದಿ ಮಾಡಿರುವುದು 6000 ರೂ.ಗಳಿಗೆ. ಈ ಮೂಲಕ ಸಾಕಷ್ಟು ಹಣ ಗುಳುಂ ಆಗಿದೆ ಎಂದು ತಿಳಿಸಿದ್ದಾರೆ.
49000 ಕನೆಕ್ಟರ್ ಖರೀದಿಯಲ್ಲಿಯೂ ಅಕ್ರಮ ಎಸಗಲಾಗಿದೆ. ಒಂದು ಕನೆಕ್ಟರ್ನ ಮಾರುಕಟ್ಟೆ ದರ 80 ರೂ. ಬೆಸ್ಕಾಂ ನಿಗದಿ ಮಾಡಿದ್ದು 152 ರೂ. ಆದರೆ ಖರೀದಿಯಾಗಿರುವುದು 855ರೂ.ಗಳಿಗೆ ಎಂದಿದ್ದಾರೆ.
ಕೂಲಿ ನೀಡುವುದರಲ್ಲಿಯೂ ಏಷ್ಯನ್ ಫ್ಯಾಬ್ ಟೆಕ್ ಲಿಮಿಟೆಡ್ ಕಂಪನಿ ಮೋಸ ಮಾಡಿದೆ. ಈ ಸಂಬಂಧ ಶೋಭಾ ಕರಂದ್ಲಾಜೆ ಸೇರಿದಂತೆ 12 ಮಂದಿ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದು ಜಯನ್ ತಿಳಿಸಿದ್ದಾರೆ.
ಸದ್ಯ ಸಿಎಂ ಆಪ್ತ ಕಾರ್ಯದರ್ಶಿ ಹಾಗೂ ಕೆಪಿಟಿಸಿಎಲ್ ಎಂಡಿಯಾಗಿರುವ ಸೆಲ್ವಕುಮಾರ್ ಮೇಲೂ ದೂರು ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.