ಬೆಂಗಳೂರು, ಡಿ.26- ವರ್ಷದ ಮೊದಲ ದಿನ ಜನಿಸುವ 24 ಹೆಣ್ಣು ಮಕ್ಕಳಿಗೆ ಐದು ಲಕ್ಷ ರೂ. ಬಂಪರ್ ಬಹುಮಾನ ಸಿಗಲಿದೆ.
ಕಳೆದ ವರ್ಷದಿಂದ ಬಿಬಿಎಂಪಿ ಪಿಂಕ್ ಬೇಬಿ ಹೆಸರಿನಲ್ಲಿ ವರ್ಷದ ಮೊದಲ ದಿನ ಜನಿಸಿದ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಈ ವರ್ಷವೂ ಯೋಜನೆಯನ್ನು ಮುಂದುವರೆಸುತ್ತಿರುವುದಾಗಿ ಮೇಯರ್ ಗಂಗಾಂಬಿಕೆ ಇಂದಿಲ್ಲಿ ಘೋಷಿಸಿದರು
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಆಸ್ಪತ್ರೆಯಲ್ಲಿ ವರ್ಷದ ಮೊದಲ ದಿನ ಹುಟ್ಟಿದ ಒಟ್ಟು 24 ಹೆಣ್ಣುಮಕ್ಕಳಿಗೆ ಐದು ಲಕ್ಷ ಪ್ರೋತ್ಸಾಹ ಧನ ಡೆಪಾಸಿಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿಯೂ ಪಿಂಕ್ ಬೇಬಿ ಯೋಜನೆ ಮುಂದುವರೆಸುತ್ತೇವೆ. ಐದು ಲಕ್ಷ ಹಣ ಆ ಮಗುವಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಸಾಮಾನ್ಯ ಹೆರಿಗೆಯಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ ಐದು ಲಕ್ಷ ರೂ. ನೀಡಲಾಗುತ್ತದೆ ಎಂದು ಅವರು ಹೇಳಿದರು.