ಬೆಂಗಳೂರು,ಡಿ.26- ಸಂಪುಟ ವಿಸ್ತರಣೆಯ ಸಂಕಷ್ಟ ಬಗೆಹರಿದ ಬೆನ್ನಲ್ಲೇ ಇದೀಗ ನೂತನ ಸಚಿವರು ಪ್ರಬಲ ಖಾತೆಗೆ ಪಟ್ಟು ಹಿಡಿದಿರುವುದು ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ.
ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟಕ್ಕೆ 8 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವರು ತಮಗೆ ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿರುವುದರಿಂದ ಖಾತೆ ಕ್ಯಾತೆ ಉಲ್ಬಣಗೊಂಡಿದೆ.
ನಿನ್ನೆ ರಾತ್ರಿಯಿಂದಲೇ ಖಾತೆ ಹಂಚಿಕೆ ಸಂಬಂಧ ನಗರಕ್ಕೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು, ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕರ ಜತೆ ಮಾತುಕತೆ ನಡೆಸಿದರು.
ಈಗಾಗಲೇ ಎರಡಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಸಚಿವರಿಂದ ಹೆಚ್ಚುವರಿ ಖಾತೆಗಳನ್ನು ಪಡೆದು ನೂತನ ಸಚಿವರಿಗೆ ನೀಡಲು ಚರ್ಚಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೃಹ ಖಾತೆ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಯುವಜನ ಕ್ರೀಡೆ ಖಾತೆಯನ್ನು ಹೊಂದಿದ್ದಾರೆ. ಗೃಹ ಖಾತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳು ತಮ್ಮಲ್ಲೇ ಇರಲಿ ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಹೈಕಮಾಂಡ್ ಮಾತ್ರ ಪರಮೇಶ್ವರ್ಗೆ ಗೃಹ ಖಾತೆ ಹೊರತು ಪಡಿಸಿ ಉಳಿದೆರಡು ಖಾತೆಗಳನ್ನು ಹಿಂಪಡೆಯಲು ಮುಂದಾಗಿದೆ.
ಇದೇ ರೀತಿ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಬಳಿ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳಿವೆ. ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗ ಆಪದ್ಭಾದವನಂತೆ ನಿಲ್ಲುವ ಡಿಕೆಶಿ ಎರಡೂ ಖಾತೆಗಳು ಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಜಲಸಂಪನ್ಮೂಲ ಖಾತೆಯನ್ನು ಡಿಕೆಶಿಗೆ ನೀಡಿ ವೈದ್ಯಕೀಯ ಶಿಕ್ಷಣ ಖಾತೆಯನ್ನು ಬೇರೊಬ್ಬರಿಗೆ ವಹಿಸಲು ಪಕ್ಷದಲ್ಲಿ ಚಿಂತನೆ ನಡೆದಿದೆ. ಆದರೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಈ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಕಾವೇರಿ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ದೆಹಲಿ ಹಾಗೂ ನ್ಯಾಯಾಲಯಗಳಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಹೋರಾಟ ಮಾಡಿದ್ದೇನೆ. ನನಗೆ ಈ ಖಾತೆ ನೀಡಿದರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ಬೇಡಿಕೆ ಎಂ.ಬಿ.ಪಾಟೀಲ್ರಿಂದ ಬಂದಿದೆ.
ಇದೇ ರೀತಿ ಜಮೀರ್ ಅಹ್ಮದ್ ಮತ್ತು ಕೃಷ್ಣಬೈರೇಗೌಡ ಕೂಡ ತಮ್ಮ ಬಳಿಯಿರುವ ಖಾತೆಗಳನ್ನು ಬಿಟ್ಟುಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ.
ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಜಮೀರ್ ಅಹ್ಮದ್ ಎರಡೂ ಖಾತೆ ನನ್ನ ಬಳಿಯೇ ಇರಲಿ ಎಂದು ಮನವಿ ಮಾಡಿದ್ದಾರೆ. ಆದರೆ ಇತ್ತೀಚೆಗಷ್ಟೇ ಸಂಪುಟಕ್ಕೆ ಸೇರ್ಪಡೆಯಾದ ರಹೀಂಖಾನ್ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಹೊಂದಿರು ಕೃಷ್ಣಬೈರೇಗೌಡ ಕೂಡ ಇದೇ ಮನಸ್ಥಿತಿಯಲ್ಲಿದ್ದಾರೆ. ಆದರೆ ಸತೀಶ್ ಜಾರಕಿಹೊಳಿ ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವುದು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮೂಲಗಳ ಪ್ರಕಾರ ಖಾತೆಗಳನ್ನು ಬದಲಾಯಿಸಲು ವರಿಷ್ಠರು ಸೂಚನೆ ಕೊಟ್ಟಿದ್ದಾರೆ.
ಪರಮೇಶ್ವರ್ಗೆ ಗೃಹ ಖಾತೆ, ತುಕಾರಾಂಗೆ ಯುವ ಜನ ಮತ್ತು ಕ್ರೀಡೆ, ರಹೀಂ ಖಾನ್ಗೆ ಅಲ್ಪಸಂಖ್ಯಾತ ವ್ಯವಹಾರ, ಆರ್.ವಿ.ದೇಶಪಾಂಡೆಗೆ ಬೃಹತ್ ಕೈಗಾರಿಕೆ, ಎಂ.ಬಿ. ಪಾಟೀಲ್ಗೆ ಬೃಹತ್ ನೀರಾವರಿ, ಸತೀಶ್ ಜಾರಕಿಹೊಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೆ.ಜೆ.ಜಾರ್ಜ್ಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಳು ಹಂಚಿಕೆಯಾಗುವ ಸಂಭವವಿದೆ.