![siddu-ramalingareddy](http://kannada.vartamitra.com/wp-content/uploads/2018/12/siddu-ramalingareddy-595x381.jpg)
ಬೆಂಗಳೂರು,ಡಿ.25- ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರ ಮನವೊಲಿಕೆ ಯತ್ನ ಫಲ ನೀಡಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ರಾಮಲಿಂಗಾರೆಡ್ಡಿಯವರು ಇಂದು ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ನಾಯಕರ ಬಳಿಯೂ ಸಚಿವ ಸ್ಥಾನದ ಬೇಡಿಕೆ ಇಟ್ಟಿರಲಿಲ್ಲ.ಈ ಬಾರಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ ಎಂಬ ಮಾತುಗಳನ್ನು ನಾಯಕರು ಹೇಳಿದರು. ಅದು ನನಗೂ ಗೊತ್ತಿತ್ತು. ಆದರೆ ನಮ್ಮಲ್ಲಾಗಿರುವ ಸಣ್ಣ ಪುಟ್ಟ ಲೋಪಗಳ ಬಗ್ಗೆ ಚರ್ಚಿಸಬೇಕಿತ್ತು ಅದನ್ನು ಚರ್ಚಿಸಿದ್ದೇನೆ.ನಮಗೆ ಅಸಮಾಧಾನವೂ ಇಲ್ಲ. ನಮ್ಮನ್ನು ಬೆಂಬಲಿಸಿ ಯಾವ ಕಾರ್ಪೋರಟರ್ಗಳು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.
ಯಾರೂ ಪ್ರತಿಭಟನೆ ಮಾಡಬೇಡಿ ಎಂದು ನಾನೇ ಹೇಳಿದ್ದೆ.ಆದರೆ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ ಎಂದು ತಿಳಿಸಿದರು.
ಯಾವ ಬಿಜೆಪಿ ನಾಯಕರು ನನ್ನನ್ನು ಭೇಟಿ ಮಾಡಿಲ್ಲ. ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ ಯಾರೂ ಕೂಡಾ ಭೇಟಿ ಮಾಡಿ ಚರ್ಚಿಸಿಲ್ಲ. ಯಲಹಂಕ ಶಾಸಕ ವಿಶ್ವನಾಥ್ ನಮ್ಮ ಮನೆಗೆ ಬಂದಿದ್ದು ನಿಜ.ಆದರೆ ರಾಜಕೀಯ ವಿಚಾರಕ್ಕಲ್ಲ; ಮದುವೆ ಆಹ್ವಾನ ಪತ್ರ ನೀಡಲು ಬಂದಿದ್ದರು ಎಂದು ಸ್ಪಷ್ಟಪಡಿಸಿದರು.
ಲೋಕ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. 2019ರ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ನಾಯಕರು ಪ್ರಧಾನಿಯಾಗಿರಬೇಕು. ಅದು ನಮ್ಮ ಮಹದಾಸೆಯಾಗಿದೆ.ನಾನು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾಲ್ಕು ಬಾರಿ ಸಚಿವನಾಗಿದ್ದೇನೆ. ಧರ್ಮಸಿಂಗ್, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಇವರೆಲ್ಲರೂ ನನ್ನ ಗುರುತಿಸಿ ಸಚಿವ ಸ್ಥಾನ ನೀಡಿದ್ದರು. ಆದರೆ ಈ ಬಾರಿ ಅವಕಾಶ ಸಿಕ್ಕಿಲ್ಲ. ಸಮಯ ಸಂದರ್ಭ ಬಂದಾಗ ಎಲ್ಲವೂ ಸಿಗುತ್ತದೆ ಎಂದರು.