ಬೆಂಗಳೂರು,ಡಿ.25-ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನವಾದರೂ ಖಾತೆ ಹಂಚಿಕೆ ಬಿಕ್ಕಟ್ಟು ಬಗೆ ಹರಿದಿಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಶನಿವಾರ 8 ಮಂದಿ ನೂತನ ಸಚಿವರು ಸೇರ್ಪಡೆಯಾದರು. ಆದರೂ ಹೊಸ ಸಚಿವರಿಗೆ ಇದುವರೆಗೆ ಖಾತೆ ಹಂಚಿಕೆಯಾಗಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಖಾತೆ ಹಂಚಿಕೆ ಕುರಿತಂತೆ ಹಗ್ಗ ಜಗ್ಗಾಟ ಮುಂದುವರೆದಿದೆ.ನೂತನ ಸಚಿವರು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿರುವುದರಿಂದ ಖಾತೆ ಹಂಚಿಕೆ ವಿಚಾರ ಸರ್ಕಾರಕ್ಕೆ ಕಗ್ಗಂಟಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಕಾಂಗ್ರೆಸ್ಪಕ್ಷದ ನಾಯಕರು ಸಮಾಲೋಚನೆ ನಡೆಸಿ ಖಾತೆ ಹಂಚಿಕೆ ಬಿಕ್ಕಟ್ಟಿಗೆ ಪರಿಹಾರ ಸೂಚಿಸಲು ಮುಂದಾಗಿದ್ದಾರೆ.
ಇಂದು ರಾತ್ರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು ನಾಳೆ ಸಂಜೆ ವೇಳೆ ಹೊಸ ಸಚಿವರಿಗೆ ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿವೆ.
ಒಂದೆಡೆ ಸಚಿವ ಸ್ಥಾನ ಸಿಗದ ಅತೃಪ್ತರ ಮನವೊಲಿಸುವ ಪ್ರಯತ್ನ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ನೂತನ ಸಚಿವರು ತಮಗೆ ಬೇಕಾದ ಖಾತೆಗೆ ಪಟ್ಟು ಹಿಡಿದಿರುವುದು ಮತ್ತೊಂದು ರೀತಿಯ ತಲೆ ನೋವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪಕ್ಷದ ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳ ಬದಲಾಗಿ ಪ್ರಮುಖ ಖಾತೆಗಳನ್ನೇ ನೀಡುವಂತೆ ನೂತನ ಸಚಿವರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಪಕ್ಷದ ಹೈ ಕಮಾಂಡ್ ಸೂಚನೆಯಂತೆ ಖಾತೆ ಹಂಚಿಕೆ ಮಾಡಿ ಬಿಕ್ಕಟ್ಟನ್ನು ಅಂತ್ಯಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಖಾತೆ ಹಂಚಿಕೆ ಕಾಂಗ್ರೆಸ್ನಲ್ಲಿ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸುವುದೋ ಅಥವಾ ಉಲ್ಬಣಗೊಳಿಸುವುದೋ ಎಂಬುದು ಕುತೂಹಲ ಕೆರಳಿಸಿದೆ.
ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ನಡೆಸುವ ಸಮಾಲೋಚನೆಯ ನಂತರ ಈ ವಿಚಾರ ತಾರ್ಕಿಕ ಅಂತ್ಯ ಕಾಣಬಹುದು.
ನೂತನ ಸಚಿವರಾಗಿ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಸತೀಶ್ ಜಾರಕಿಹೊಳಿ,ಸಿ.ಎಸ್.ಶಿವಳ್ಳಿ,ಪಿ.ಟಿ.ಪರಮೇಶ್ವರ್ ನಾಯ್ಕ್, ರಹೀಂಖಾನ್, ಇ.ತುಕಾರಾಂ, ಎಂಟಿಬಿ ನಾಗರಾಜ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಖಾತೆ ಹಂಚಿಕೆ ನಿರೀಕ್ಷೆಯಲ್ಲಿದ್ದಾರೆ.