ಬೆಂಗಳೂರು,ಡಿ.25-ನಿನ್ನೆ ಹತ್ಯೆಗೀಡಾದ ಜೆಡಿಎಸ್ ಮುಖಂಡ ಪ್ರಕಾಶ್ ಅವರ ಸ್ವಗ್ರಾಮ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಹಾಗೂ ವಿಷ ಪ್ರಸಾದ ಸೇವನೆಯಿಂದ ಭಕ್ತರು ಮೃತಪಟ್ಟಿರುವ ಮತ್ತು ತೊಂದರೆಗೀಡಾದ ಕುಟುಂಬಗಳ ಸದಸ್ಯರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಲಿದ್ದಾರೆ.
ವಿಜಯಪುರ ಜಿಲ್ಲಾ ಪ್ರವಾಸ ಮುಗಿಸಿದ ನಂತರ ಮುಖ್ಯಮಂತ್ರಿಗಳು ಮಧ್ಯಾಹ್ನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಗೆ ಭೇಟಿ ನೀಡಿ ನಿನ್ನೆ ಹತ್ಯೆಗೀಡಾದ ಜೆಡಿಎಸ್ ಮುಖಂಡ ಪ್ರಕಾಶ್ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.
ನಿನ್ನೆ ನಡೆದ ಹತ್ಯೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು.
ತದನಂತರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೀದರಹಳ್ಳಿಗೆ ತೆರಳಲಿದ್ದಾರೆ. ಇತ್ತೀಚೆಗೆ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ಪ್ರಸಾದ ಸೇವಿಸಿ ಮೃತರಾದ ಹಾಗೂ ತೊಂದರೆಗೊಳಗಾದ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.
ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರು ಆಸ್ಪತ್ರೆ ಸೇರಿದ ಸುದ್ದಿ ತಿಳಿದ ಕೂಡಲೇ ಮೈಸೂರಿಗೆ ತೆರಳಿದ್ದ ಮುಖ್ಯಮಂತ್ರಿ ಮೃತ ಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ಘೋಷಿಸಿದರಲ್ಲದೇ, ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚ ಭರಿಸುವಂತೆ ಸೂಚನೆ ನೀಡಿದ್ದರು. ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು.
ಇಂದು ಮೃತ ಪಟ್ಟವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ. ಅಂತೆಯೇ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ವಿಚಾರಿಸಲಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿದೆ.