ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸಂಪುಟ ವಿಸ್ತರಣೆ ಮಾಡಿದ ಬೆನ್ನಲ್ಲೇ ಪಕ್ಷದಲ್ಲಿ ಅತೃಪ್ತ ಬಣ ಬಂಡಾಯ ಎದ್ದಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಇಂದು ಅತೃಪ್ತ ಶಾಸಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಬೆಳವಣಿಗೆಯಿಂದ ಮೈತ್ರಿ ಸರ್ಕಾರಕ್ಕೆ ಕುತ್ತು ಎದುರಾಗುವ ಲಕ್ಷಣ ಗೋಚರವಾಗಿದೆ.
ಕಾಂಗ್ರೆಸ್ನಲ್ಲಿ 8 ಹೊಸ ಶಾಸಕರು ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಪಕ್ಷದ ನಡೆಯ ಬಗ್ಗೆ ಕೆಲ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಇಂದು ರಮೇಶ್ ಜಾರಕಿಹೊಳಿ ಬೆಂಬಲಿತ ಶಾಸಕರಿಂ ಸಭೆ ನಡೆಯಲಿದೆ ಎನ್ನಲಾಗಿದೆ. ಸಭೆಯಲ್ಲಿ ಶಾಸಕ ಬಿ. ನಾಗೇಂದ್ರ, ಗಣೇಶ್, ಭೀಮಾನಾಯಕ್, ಪ್ರತಾಪ್ ಗೌಡ ಪಾಟೀಲ್, ಶ್ರೀಮಂತ್ ಪಾಟೀಲ್, ಮಹೇಶ ಕುಮಟಹಳ್ಳಿ, ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇನ್ನು, ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಮುಂದೆ ತಾಳಬಹುದಾದ ನಿಲುವುಗಳ ಬಗ್ಗೆ ಚರ್ಚೆ ಮಾಡಲು ಅವರು ನಿರ್ಧರಿಸಿದ್ದಾರೆ. ಸಭೆಯಲ್ಲಿ ತಮ್ಮ ಬೆಂಬಲಿತ ಅತೃಪ್ತ ಶಾಸಕರ ಅಭಿಪ್ರಾಯ ಕೂಡ ಪಡೆಯಲಿದ್ದಾರೆ.
ಸಚಿವ ಸ್ಥಾನ ನೀಡುವಂತೆ ಹಿರಿಯ ನಾಯಕರ ಬಳಿ ಒತ್ತಾಯಿಸಬೇಕೇ ಅಥವಾ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯಬೇಕೆ ಎಂಬುದರ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಈ ವೇಳೆ ಯಾವ ನಿರ್ಧಾರಕ್ಕೆ ಒಮ್ಮತ ಬರುತ್ತದೆಯೋ ಆ ರೀತಿಯಲ್ಲಿ ಎಲ್ಲ ಶಾಸಕರು ಮುಂದುವರೆಯುವ ಆಲೋಚನೆಯಲ್ಲಿದ್ದಾರೆ. ಹಾಗಾಗಿ, ಇಂದಿನ ಸಭೆ ಭಾರೀ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ಮೈತ್ರಿ ಸರ್ಕಾರದ ಭವಿಷ್ಯ ಇಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ ಎನ್ನುವ ಮಾತುಗಳು ಕೇಳಿ ಬ0ದಿವೆ.