ನವದೆಹಲಿ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ 100 ರೂ. ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಾಣ್ಯ ಬಿಡುಗಡೆ ಮಾಡಿದರು.ಈ ನಾಣ್ಯ 135 ಗ್ರಾಂ ತೂಕ ಇದ್ದು ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಚಿತ್ರ ಹಾಗೂ ಅದರ ಕೆಳಗೆ ವಾಜಪೇಯಿ ಅವರ ಹೆಸರು ಮತ್ತು ಜನನ ಹಾಗೂ ಮರಣ ವರ್ಷ (1924-2018) ನಮೂದಿಸಲಾಗಿದೆ. ಮತ್ತೊಂದು ಬದಿಯಲ್ಲಿ ಅಶೋಕ ಸ್ತಂಭದ ಲಾಂಛನದ ಕೆಳಗೆ ಸತ್ಯಮೇವ ಜಯತೆ ಹಾಗೂ ಅದರಡಿ 100 ರೂ. ಎಂದು ಬರೆದಿದೆ. ಒಂದು ಬದಿಯಲ್ಲಿ ಭಾರತ ಹಾಗೂ ಮತ್ತೊಂದು ಬದಿಯಲ್ಲಿ ಇಂಡಿಯಾ ಎಂದು ದೇವನಾಗರಿ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ಈ ನಾಣ್ಯವನ್ನು ಬೆಳ್ಳಿ (ಶೇ. 50), ತಾಮ್ರ (ಶೇ. 40), ನಿಕ್ಕಲ್ (ಶೇ.5) ಮತ್ತು ಜಿಂಕ್ (ಶೇ.5) ಲೋಹ ಬಳಸಿ ತಯಾರಿಸಲಾಗಿದೆ.
ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಉಪಸ್ಥಿತರಿದ್ದರು.
PM Narendra Modi releases Rs 100 coin in memory of Atal Bihari Vajpayee