ಬೆಂಗಳೂರು,ಡಿ.24- ಯಡಿಯೂರು ವಾರ್ಡ್ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಗುಣಮಟ್ಟದ ಧ್ರುವತಾರೆ ಟೇಬಲ್ ಟೆನ್ನಿಸ್ ಅಕಾಡೆಮಿಯ ಸದುಪಯೋಗ ಪಡೆದು ಕ್ರೀಡಾಪಟುಗಳು ರಾಜ್ಯಕ್ಕೆ ಕೀರ್ತಿ ತರಬೇಕೆಂದು ಮೇಯರ್ ಗಂಗಾಬಿಕೆ ಕರೆ ನೀಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಲಿಕೆಯ ಅನುದಾನದಲ್ಲಿ ಯಡಿಯೂರು ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಧ್ರುವತಾರೆ ಟೇಬಲ್ ಟೆನ್ನಿಸ್ ಅಕಾಡೆಮಿ ನಿರ್ಮಿಸಲಾಗಿದೆ ಎಂದರು.
ಒಂದು ಅವಧಿಗೆ ಹತ್ತರಿಂದ ಇಪ್ಪತ್ತು ಮಂದಿ ಬಾಲಕರು, ಯುವಕ-ಯುವತಿಯರು ಟೇಬಲ್ ಟೆನ್ನಿಸ್ ತರಬೇತಿ ಪಡೆಯುವ ಅವಕಾಶವಿದ್ದು, ದಿನವೊಂದಕ್ಕೆ ಎಂಟು ಅವಧಿಯಲ್ಲಿ ಎಂಬತ್ತರಿಂದ ನೂರಾ ಅರವತ್ತು ಮಂದಿ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಾಗಿದ್ದು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅತ್ಯುತ್ತಮ ಟೇಬಲ್ ಟೆನ್ನಿಸ್ ಕ್ರೀಡಾ ಪಟುಗಳು ಅಕಾಡೆಮಿಯಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದು, ಕ್ರೀಡಾಸಕ್ತರಿಗೆ ಉತ್ತಮ ಕಲಿಕೆಗೆ ಅನುಕೂಲವಾಗಲಿದೆ ಎಂದರು.
ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ, ಅದರಲ್ಲೂ ಮಧ್ಯಮ, ಕೆಳ ಮಧ್ಯಮ ವರ್ಗದ ಕುಟುಂಬಗಳಿಂದ ಬರುವಂತಹ ಬಾಲ ಪ್ರತಿಭೆ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವರಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಗುಣಮಟ್ಟದ ಅಂಗಣಗಳನ್ನು , ಸೌಲಭ್ಯಗಳನ್ನು, ಕ್ರೀಡಾ ಸಲಕರಣೆಗಳನ್ನು ಉಚಿತವಾಗಿ ಒದಗಿಸುವುದರ ಜೊತೆಗೆ ಅತ್ಯುತ್ತಮ ತರಬೇತುದಾರರಿಂದ ತರಬೇತಿ ಕೊಡಿಸುವ ಮೂಲಕ ಪ್ರತಿಭಾವಂತ, ಉದಯೋನ್ಮುಖ ಕ್ರೀಡಾ ತಾರೆಗಳನ್ನು ರಾಜ್ಯಕ್ಕೆ, ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಹಲವು ಕ್ರೀಡಾ ಅಂಗಣಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದೊಂದಿಗೆ ನಿರ್ಮಿಸಲಾಗಿದೆ ಎಂದು ಮಾಜಿ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರದ ಅತಿ ದೊಡ್ಡ ಹವಾನಿಯಂತ್ರಿತ ವ್ಯಾಯಾಮ ಶಾಲೆ ಎಂಬ ಖ್ಯಾತಿ ಪಡೆದಿರುವ ವಜ್ರದೇಹಿ ವ್ಯಾಯಾಮ ಶಾಲೆಯಲ್ಲಿ 1,500ಕ್ಕೂ ಹೆಚ್ಚು ಮಂದಿ ತರಬೇತಿ ಪಡೆಯುತ್ತಿದ್ದಾರೆ.ಕಳೆದ 4 ವರ್ಷಗಳಲ್ಲಿ 50ಕ್ಕೂ ಹೆಚ್ಚು ಮಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವ ಮೂಲಕ ಯಡಿಯೂರು ವಾರ್ಡ್ಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಅದೇ ರೀತಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಿರುವ ನವತಾರೆ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ನೂರಾರು ಮಂದಿ ಪ್ರತಿಭಾವಂತ ಷಡಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.ಇದೀಗ ಯಡಿಯೂರು ವಾರ್ಡ್ ಹೆಮ್ಮೆಯ ಕಿರೀಟಕ್ಕೆ ಧ್ರುವತಾರೆ ಟೇಬಲ್ ಟೆನ್ನಿಸ್ ಅಕಾಡೆಮಿಯೂ ಸೇರ್ಪಡೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿರುವ ನಿರುದ್ಯೋಗ ಯುವಕ, ಯುವತಿಯರಿಗೆ ಮತ್ತು ವಿವಿಧ ಉದ್ಯೋಗಗಳ ಕಸುಬುದಾರರಿಗೆ ಪಾಲಿಕೆಯ ಕಲ್ಯಾಣ ಇಲಾಖೆ ವತಿಯಿಮದ ಸಹಾಯಧನ ಮತ್ತು ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.