ಬೆಂಗಳೂರು, ಡಿ.24-ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ಸಾಕ್ಷರತಾ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿನೂತನ ಸಾಕ್ಷರತಾ ಕಾರ್ಯಕ್ರಮದಡಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.
ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಮತ್ತು ಲೋಕಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಕೆ.ಎನ್.ವಿಜಯ್ ಬಿಡುಗಡೆ ಮಾಡಿದರು.
ಡಾ.ಡಿ.ಎನ್.ನಂಜುಂಡಪ್ಪ ವರದಿ ಅನ್ವಯ 19 ಜಿಲ್ಲೆಗಳ 95 ತಾಲ್ಲೂಕುಗಳ ಹಿಂದುಳಿದ ಆಯ್ದ ಗ್ರಾಮ ಪಂಚಾಯ್ತಿಗಳನ್ನು ಸಾಕ್ಷರತಾ ಕಾರ್ಯಕ್ರಮ ಆಯೋಜಿಸಲು, ರಾಜ್ಯದ 20 ಜಿಲ್ಲೆಗಳ ನಗರ-ಕೊಳಗೇರಿ ಪ್ರದೇಶಗಳ ಅನಕ್ಷರಸ್ಥರಿಗೆ ಸಾಕ್ಷರತಾ ಕಾರ್ಯಕ್ರಮ, 20 ಜಿಲ್ಲೆಗಳಲ್ಲಿನ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಅನಕ್ಷರಸ್ಥ ಮಹಿಳಾ ಸದಸ್ಯರಿಗೆ ಸಾಕ್ಷರತೆ ಕಾರ್ಯಕ್ರಮ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ 6 ಜಿಲ್ಲೆಗಳಲ್ಲಿ 1500 ಗ್ರಾಮ ಪಂಚಾಯ್ತಿಯ ಅನಕ್ಷರಸ್ಥ ಸದಸ್ಯರಿಗೆ 21 ದಿನಗಳ ಸಾಕ್ಷರತಾ ಶಿಬಿರ ಸೇರಿದಂತೆ ಒಟ್ಟು 4 ವಿನೂತನ ಸಾಕ್ಷರತಾ ಕಾರ್ಯಕ್ರಮಗಳ ಪೂರಕವಾಗಿ ಕಲಿಕಾರ್ಥಿಗಳಿಗೆ ಮತ್ತು ಕಲಿಕಾ ವಾತಾವರಣ ನಿರ್ಮಾಣಕ್ಕೆ ಅನುಕೂಲವಾಗುವ ಪ್ರಚಾರ ಸಾಮಗ್ರಿಗಳನ್ನು ಸಿದ್ದಪಡಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಲೋಕ ಶಿಕ್ಷಣ ನಿರ್ದೇಶನಾಲಯ-ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಪರಿಕಲ್ಪನೆಯಡಿ ನಾಲ್ಕು ಭಿತ್ತಿ ಚಿತ್ರಗಳು, ಒಂದು ಸ್ಟಿಕ್ಕರ್ ಮತ್ತಿತರ ಸಾಮಗ್ರಿಗಳನ್ನು ಸಿದ್ದಪಡಿಸಲಾಗಿದೆ. ಈ ಪ್ರಚಾರ ಸಾಮಾಗರಿಗಳ ಮೂಲಕ ಬೆಂಗಳೂರು ಗ್ರಾಮಾಂತರ, ಬೆಳಗಾವಿ/ಚಿಕ್ಕೋಡಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಹಾವೇರಿ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು/ ಮಧುಗಿರಿ, ವಿಜಯಪುರ, ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.