ಬೆಂಗಳೂರು, ಡಿ.24- ಬೆಂಗಳೂರು ಮಹಾನಗರದಾದ್ಯಂತ ಆರು ಸಾವಿರ ಸ್ಥಳಗಳಲ್ಲಿ ಉಚಿತ ವೈ-ಫೈ ಅಳವಡಿಸುವ ಮೂಲಕ ಐಟಿ ಬಿಟಿ ಸಿಟಿಯನ್ನು ಮತ್ತಷ್ಟು ಹೈಟೆಕ್ ಮಾಡಲು ಬಿಬಿಎಂಪಿ ಮುಂದಾಗಿದೆ.
ನಾಲ್ಕು ಕಂಪೆನಿ ಜತೆ ವೈ-ಪೈ ಅಳವಡಿಸಲು ಕೆಲವು ಷರತ್ತುಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದ್ದು, ಸಿಲಿಕಾನ್ ಸಿಟಿಯ ಆರು ಸಾವಿರ ಜಾಗದಲ್ಲಿ ಇನ್ನು ಮುಂದೆ ಉಚಿತ ವೈ-ಫೈ ಸಿಗಲಿದೆ. ಸ್ಮಾರ್ಟ್ ಫೋನ್ ಇಟ್ಟುಕೊಂಡವರು ಇಂಟರ್ನೆಟ್ ಸೌಲಭ್ಯ ಪಡೆದುಕೊಳ್ಳುವ ಅಗತ್ಯವಿಲ್ಲ. ನಗರದ ಯಾವ ಕಡೆ ಹೋದರೂ ವೈ-ಫೈ ಸೌಲಭ್ಯ ನಿಮಗೆ ದೊರೆಯಲಿದೆ.
ಮಾಹಿತಿ-ತಂತ್ರಜ್ಞಾನ ಮತ್ತು ಅಂತರ್ಜಾಲ ಸೇವೆಯನ್ನು ಮತ್ತಷ್ಟು ಉತ್ತೇಜಿಸುವ ದೃಷ್ಟಿಯಿಂದ ಉಚಿತ ವೈ-ಫೈ ಸೇವೆ ಒದಗಿಸಲು ಮುಂದಾಗಿದೆ.ಬಹುತೇಕ ನಗರದಲ್ಲಿ ವಾಸಿಸುವ ಶೇ.90ಕ್ಕೂ ಹೆಚ್ಚು ಜನರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿವೆ, ಇಂಟರ್ನೆಟ್ ಸೌಲಭ್ಯವಿದೆ.ಆ ಸೌಲಭ್ಯವನ್ನು ಉಚಿತವಾಗಿ ದೊರೆಯುವಂತೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಕೆಲ ಏಜೆನ್ಸಿಗಳು ಉಚಿತ ವೈ-ಫೈ ಸೇವೆ ನೀಡಲು ಮುಂದಾಗಿದೆ.ಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಈ ಸೇವೆ ನೀಡಲು ಬಿಬಿಎಂಪಿ ಜತೆ ಒಪ್ಪಂದವನ್ನೂ ಸಹ ಮಾಡಿಕೊಂಡಿದ್ದು, ಮೊದಲ ಹಂತವಾಗಿ ಜನವರಿ ತಿಂಗಳಾಂತ್ಯದಲ್ಲಿ ಸೇವೆ ಲಭ್ಯವಾಗಲಿದೆ.ಸೇವೆ ಪಡೆಯುವ ಬಳಕೆದಾರರಿಗೆ ಕಂಪೆನಿಗಳು ಕೆಲ ಷರತ್ತುಗಳನ್ನು ಹಾಕಿವೆ.
ಮೊದಲ ಅರ್ಧ ಗಂಟೆ ಕಾಲ ಸೇವೆ ಉಚಿತವಾಗಿದ್ದು, ಸೇವೆಯನ್ನು ಮುಂದುವರಿಸುವುದಾದರೆ ಅದಕ್ಕೆ ಇಂತಿಷ್ಟು ಹಣ ಪಾವತಿ ಮಾಡಬೇಕಿದೆ.ನಾಲ್ಕು ಏಜೆನ್ಸಿಗಳು ಸಣ್ಣ ಡಿವೈಸ್ ಮೂಲಕ ಸೇವೆ ನೀಡುತ್ತಿದ್ದು, ಹನಿಕೂಂಬ್-2516, ಡಾಸ್ವಿನ್-2116, ಆ್ಯಕ್ಟ್-766 ಮತ್ತು ಇಂಡನ್ ಟವರ್-140 ಸ್ಥಳಗಳಲ್ಲಿ ಸೇವೆ ನೀಡಲು ಮುಂದಾಗಿವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಾಗ ಉಚಿತ ಸೇವೆಯ ನಿಯಮಗಳು ಬದಲಾಗಲಿವೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಜನವರಿ ತಿಂಗಳಾಂತ್ಯದಲ್ಲಿ 800 ಸ್ಥಳಗಳಲ್ಲಿ ಈ ಸೇವೆ ಆರಂಭವಾಗಲಿದೆ. ಏಪ್ರಿಲ್ ಅಂತ್ಯದೊಳಗೆ ಮೂರು ಸಾವಿರ ಸ್ಥಳಗಳಲ್ಲಿ ಸೇವೆ ಲಭ್ಯವಾಗಲಿದ್ದು, ಇದಕ್ಕಾಗಿ ಏಜೆನ್ಸಿಗಳು ಪಾಲಿಕೆಗೆ 63 ಸಾವಿರ ಹಣ ಪಾವತಿ ಮಾಡುತ್ತಿವೆ. ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಈ ಸೇವೆ ಪಡೆಯಬಹುದಾಗಿದೆ.