ಬೆಂಗಳೂರು, ಡಿ.24- ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.
ಇಂದು ಹಲವರು ವಿವಿಧೆಡೆ ರಸ್ತೆತಡೆ ನಡೆಸಿ, ಪ್ರತಿಭಟನೆ ನಡೆಸಿದರೆ ಮತ್ತೆ ಕೆಲವೆಡೆ ಬೆಂಬಲಿಗರು ಪ್ರತ್ಯೇಕ ಸಭೆ ನಡೆಸಿ ಪಕ್ಷದ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಏಳು ಬಾರಿ ಶಾಸಕರಾಗಿ, ಎರಡು ಬಾರಿ ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ 27 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿರುವ ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಏಕೆ ಸೇರ್ಪಡೆ ಮಾಡಿಕೊಂಡಿಲ್ಲ ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
ನಗರದ ಮೌರ್ಯ ಹೊಟೇಲ್ನಲ್ಲಿ ಸಭೆ ಸೇರಿದ್ದ ಕಾರ್ಪೊರೇಟರ್ ಗಳಾದ ಮಂಜುನಾಥರೆಡ್ಡಿ, ರಿಜ್ವಾನ್, ಮಾಜಿ ಸದಸ್ಯರಾದ ಉದಯ್ಶಂಕರ್, ರಾಮಚಂದ್ರ, ಮುನಿರಾಜು, ಜಯನಗರ, ಬಿಟಿಎಂ ಲೇಔಟ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬೆಂಗಳೂರು ನಗರ -ಜಿಲ್ಲಾ ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ದನ್, ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್ ಸೇರಿದಂತೆ ಹಲವು ಮುಖಂಡರು ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಅತ್ತ ರಾಮಲಿಂಗಾರೆಡ್ಡಿ ಬೆಂಬಲಿಗರು ಆನೇಕಲ್, ಹೆನ್ನಾಗರ ಗೇಟ್ ಬಳಿ ರಸ್ತೆ ತಡೆ ನಡೆಸಿದ್ದರಿಂದ ಹಲವೆಡೆ ಟ್ರಾಫಿಕ್ ಜಾಮ್ ಆಯಿತು.ಅವರ ಬೆಂಬಲಿಗರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಕಿಲೋಮೀಟರ್ಗಟ್ಟಲೆ ವಾಹನಗಳು ನಿಂತಿದ್ದವು.
ಸಚಿವರಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿರುವ ರಾಮಲಿಂಗಾರೆಡ್ಡಿ ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ.ಅವರಿಂದ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಿದೆ. ಇಂದಿರಾಗಾಂಧಿ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಮುಂಬರುವ ಲೋಕಸಭೆ ಚುನಾವಣೆಗೆ ಅನುಕೂಲವಾಗಲಿದೆ.ಯಾವ ಕಾರಣದಿಂದ ಅವರನ್ನು ಕೈ ಬಿಡಲಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಅವರಿಗೆ ಉನ್ನತ ಸ್ಥಾನ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.