ಬೆಂಗಳೂರು, ಡಿ.24-ಭಾರತದ ಐಟಿ-ಬಿಟಿ ಕ್ಷೇತ್ರ ಅಭಿವೃದ್ಧಿ ಪಥದಲ್ಲಿದ್ದು, ವಿಶ್ವದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ಐಟಿ-ಬಿಟಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು.
ಸೆಮಿ ಕಂಡಕ್ಟರ್ ಫ್ಯಾಬಲೆಸ್ ಆ್ಯಕ್ಸಲೇಟರ್ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೂ ಉತ್ತಮ ಬೆಳವಣಿಗೆ ಸಾಧಿಸಲು ನಮ್ಮ ಸರ್ಕಾರ ಸಂಶೋಧನೆಗೆ ಒತ್ತು ನೀಡುತ್ತಿದೆ. ಈ ಹಂತದಲ್ಲಿ ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಪ್ರತಿಯೊಂದು ಎಲೆಕ್ಟ್ರಾನಿಕ್ ವಸ್ತುಗಳಿಗೆ ಚಿಪ್ ಅಗತ್ಯ.ಆದರೆ ಚಿಪ್ ತಯಾರಿಕೆ ದುಬಾರಿಯಾಗಿದ್ದು, ತೈವಾನ್, ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮಲ್ಲಿ ಬಳಕೆ ಹೆಚ್ಚುತ್ತಿದೆ.ಆದರೆ ಉತ್ಪಾದನೆ ಕಡಿಮೆಯಾಗಿದೆ.ಈ ಹಿನ್ನೆಲೆಯಲ್ಲಿ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದ್ದು, ಇದರ ವಿನ್ಯಾಸ ಮತ್ತು ಪರೀಕ್ಷೆಗಾಗಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿಶ್ವದಲ್ಲಿ ಒಟ್ಟಾರೆ ಇರುವ ಇಂತಹ ಉದ್ಯಮಗಳ ಎರಡು ಮಿಲಿಯನ್ ಕಂಪನಿಗಳಲ್ಲಿ ಚೀನಾ ಒಂದರಲ್ಲೇ 1500 ಕಂಪೆನಿಗಳಿವೆ.ನಮ್ಮಲ್ಲಿ 83 ಕಂಪನಿಗಳಿವೆ. 10 ಸಾವಿರ ಮಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲಿ ಉದ್ಯಮ ಬೆಳೆಯಲಿದೆ.ನಮ್ಮ ರಾಜ್ಯ ತಾಂತ್ರಿಕತೆಯ ಕೇಂದ್ರವಾಗಿದೆ. 20 ವರ್ಷಗಳ ಹಿಂದೆಯೇ ಕಿಯೋನಿಕ್ಸ್ನ ವ್ಯವಸ್ಥಾಪಕರಾಗಿದ್ದ ಎಸ್.ಎಂ.ಪಟ್ನಾಯಕ್ ನಮ್ಮ ಬಳಿ ಬಂದು ಮಾಹಿತಿ ತಂತ್ರಜ್ಞಾನದ ಬಗ್ಗೆ ವಿವರಣೆ ನೀಡಿದ್ದರು ಎಂದು ಸ್ಮರಿಸಿದರು.
ಈ ಕ್ಷೇತ್ರದ ಅಭಿವೃದ್ಧಿ ಅಗತ್ಯವಿರುವ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ.ಐಟಿ-ಬಿಟಿಗೆ ಯಾವುದೇ ನೆರವು ಬೇಕಾದರೂ ನೀಡಲಿದ್ದೇವೆ ಎಂದ ಅವರು, ಅಂದಿನಿಂದ ಇಂದಿನವರೆಗೂ ಕಾಲ ಕಾಲಕ್ಕೆ ಸರ್ಕಾರ ಕ್ರಮಕೈಗೊಂಡಿರುವುದರಿಂದ ನಮ್ಮಲ್ಲೂ ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಮುಂದಿನ 5 ವರ್ಷಗಳಲ್ಲಿ ಮತ್ತಷ್ಟು ಸಾಧನೆ ಮುಂದುವರೆಯಲಿದೆ. ಕೃಷಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ನೆರವು ಅಳವಡಿಸಿಕೊಳ್ಳಬೇಕಿದೆ.ಈ ನಿಟ್ಟಿನಲ್ಲಿ ಐಟಿ ಉದ್ಯಮಿಗಳು ಕೆಲಸ ಮಾಡಬೇಕು. ಇದಕ್ಕಾಗಿ ಕ್ರಿಷ್ ಗೋಪಾಲಕೃಷ್ಣ ನೇತೃತ್ವದಲ್ಲಿ ರಚಿಸಿರುವ ಸಮಿತಿ ಕಾಲಕಾಲಕ್ಕೆ ನೀಡುವ ಸಲಹೆ, ಮಾರ್ಗದರ್ಶನವನ್ನು ಅನುಸರಿಸಿ ಸರ್ಕಾರ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಮಾಹಿತಿ ತಂತ್ರಜ್ಞಾನದ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, 1997ರಲ್ಲಿ ಮಾಹಿತಿ ತಂತ್ರಜ್ಞಾನ ಆರಂಭವಾಯಿತು. ಸಣ್ಣ ಕಂಪನಿಗಳು ಮೊದಲು ಚಿಪ್ ವಿನ್ಯಾಸ ಪಡೆಯಲು ಕಷ್ಟಸಾಧ್ಯವಿತ್ತು. ಈ ಹಿನ್ನೆಲೆಯಲ್ಲಿ ಸೆಮಿ ಕಂಡಕ್ಟರ್,ಫ್ಯಾಬಲೆಸ್ ಆ್ಯಕ್ಸಾಲೇಟರ್ ಲ್ಯಾಬ್ ಆರಂಭಿಸಲಾಗಿದೆ. ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಸೇರಿದಂತೆ ಇತರೆ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಉದ್ದಿಮೆಗೆ ಒತ್ತು ನೀಡಲಾಗುತ್ತಿದೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿ ಎಚ್.ಪಿ.ಕಿಂಚಾ ಮಾತನಾಡಿ, 2007 ಮಾಹಿತಿ ತಂತ್ರಜ್ಞಾನದ ಮೈಲಿಗಲ್ಲು ಸಾಧಿಸಿದ ವರ್ಷ.ಗೂಗಲ್, ಟ್ವೀಟರ್ ಸ್ಮಾರ್ಟ್ ಫೋನ್ ಸೇರಿದಂತೆ ಮಹತ್ವದ ತಾಂತ್ರಿಕತೆ ಆ ವರ್ಷದಲ್ಲೇ ಆರಂಭವಾದವು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರುಣ್ಕುಮಾರ್, ಮುನಿಸ್ವಾಮಿ, ಇಲಾಖೆ ನಿರ್ದೇಶಕ ಗಿರೀಶ್ ಜಿತೇಂದ್ರ ಮತ್ತಿತರರು ಉಪಸ್ಥಿತರಿದ್ದರು.