ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಲು ಪ್ರಯತ್ನಿಸಿದ 11 ಮಹಿಳೆಯರನ್ನು ಸ್ಥಳೀಯ ಭಕ್ತರು ತಡೆದಿದ್ದಾರೆ.
ದೇಗುಲ ಪ್ರವೇಶಕ್ಕೆ ಆಗಮಿಸಿದ್ದ ಈ ಎಲ್ಲಾ ಮಹಿಳೆಯರೂ 50 ವರ್ಷದೊಳಗಿನವರಾಗಿದ್ದು ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಅವರನ್ನೆಲ್ಲ ಪಂಪಾದಲ್ಲೇ ತಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇವರೆಲ್ಲ ಮನಿಟಿ ಸಂಘಟನೆಗೆ ಸೇರಿದ ಮಹಿಳೆಯರಾಗಿದ್ದು ಪೊಲೀಸ್ ಬಿಗಿ ಭದ್ರತೆಯಲ್ಲಿ ಶಬರಿಮಲೆಯನ್ನು ತಲುಪಿದ್ದರು. ಆದರೆ ಪಂಪಾ ಶಿಬಿರದ ಬಳಿಯೇ ಅವರನ್ನು ನೋಡಿದ ಪ್ರತಿಭಟನಾಕಾರರು ಮುಂದೆ ಹೋಗಲು ಬಿಡಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯರಿಗೆ ಅಲ್ಲಿನ ಸ್ಥಿತಿ ವಿವರಿಸಲು ಯತ್ನಿಸಿದ್ದಾರೆ. ಸ್ಥಳದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇರುತ್ತದೆ ಎಂದು ಕೂಡ ಹೇಳಿದ್ದಾರೆ. ಆದರೂ ಕೇಳದ ಮಹಿಳೆಯರು ದೇವಸ್ಥಾನಕ್ಕೆ ಹೋಗಲೇ ಬೇಕು ಎಂದು ಹೇಳಿ ಮುಂದೆ ಹೊರಟಿದ್ದರು. ಅದನ್ನು ನೋಡಿದ ಭಕ್ತರು ಸೆಕ್ಷನ್ 144 ಜಾರಿಯಲ್ಲಿದ್ದರೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.
ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ತಕ್ಷಣ ಪೊಲೀಸರು ಬಸ್ ಸಂಚಾರ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳೆಯರು, ತಮಗೆ ರಕ್ಷಣೆ ನೀಡುವುದಾಗಿ ಕೇರಳ ಪೊಲೀಸರು ಭರವಸೆ ನೀಡಿದ್ದರು. ಆದರೆ ಈಗ ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
22-45 ವರ್ಷದವರೆಗಿನ ಸುಮಾರು 40 ಜನ ಸದಸ್ಯೆಯರು ಭಾನುವಾರ ಶಬರಿಮಲೆಗೆ ತೆರಳುತ್ತೇವೆ ಎಂದು ಚೆನ್ನೈ ಮೂಲದ ಮನಿಟಿ ಮಹಿಳಾ ಸಂಘಟನೆ ಶನಿವಾರವೇ ತಿಳಿಸಿತ್ತು. ನಾವೆಲ್ಲ ಸಂಪ್ರದಾಯಬದ್ಧವಾಗಿ ವ್ರತ ನಡೆಸಿದ್ದೇವೆ. ಇಲ್ಲಿಗೆ ಕಾರ್ಯಕರ್ತೆಯರಾಗಿ ಬಂದಿಲ್ಲ. ಯಾತ್ರಾರ್ಥಿಗಳಾಗಿ ಧಾವಿಸಿದ್ದೇವೆ. ದೇವಸ್ಥಾನದಲ್ಲಿ ಪೂಜೆ ನಡೆಸಬೇಕು. ಇದಕ್ಕಾಗಿ ನಮಗೆ ರಕ್ಷಣೆ ಬೇಕು ಎಂದು ಸಂಘಟನೆಯ ಎಲ್.ವಸಂತಿ ತಿಳಿಸಿದ್ದಾರೆ.
Women Evicted From Sabarimala Base Camp Amid Protests