ಬೆಂಗಳೂರು,ಡಿ.23-ಸಚಿವ ಸಂಪುಟದಿಂದ ತಮ್ಮನ್ನು ತೆಗೆದು ಹಾಕಿರುವುದಕ್ಕೆ ಆಕ್ರೋಶಗೊಂಡಿರುವ ಮಾಜಿ ಸಚಿವ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದಾರೆ.
ಸಚಿವ ಸ್ಥಾನವೇ ಹೋದ ಮೇಲೆ ನನಗ್ಯಾಕ್ರಿ ಶಾಸಕ ಸ್ಥಾನ?ಮುಂದಿನ ವಾರ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಆಪ್ತರ ಜೊತೆ ದೂರವಾಣಿಯಲ್ಲಿ ಮಾತನಾಡಿರುವುದು ಬಹಿರಂಗಗೊಂಡಿದೆ.
ಒಂದು ವೇಳೆ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ದೋಸ್ತಿ ಸರ್ಕಾರಕ್ಕೆ ಬಹುದೊಡ್ಡ ಕಂಟಕ ಎದುರಾಗುವುದರಲ್ಲಿ ಸಂದೇಹವಿಲ್ಲ. ಮೊದಲೇ ಸರಳ ಬಹುಮತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ಇನ್ನು ಕೆಲವು ಶಾಸಕರು ರಾಜೀನಾಮೆ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಇಂದು ಬೆಳಗ್ಗೆ ರಮೇಶ್ ಜಾರಕಿಹೊಳಿ ತಮ್ಮ ಆಪ್ತರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರ ಬೆಂಬಲಿಗನೊಬ್ಬ ಅಣ್ಣಾ ನಿಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಅಪಮಾನ ಮಾಡಿದ್ದಾರೆ ಎಂದು ನೋವು ತೋಡಿಕೊಳ್ಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ನನಗೆ ಸಚಿವ ಸ್ಥಾನ ಹೋದ ಮೇಲೆ ಶಾಸಕ ಸ್ಥಾನ ಯಾಕೆ ಬೇಕು?ಮುಂದಿನ ವಾರ ರಾಜೀನಾಮೆ ಸಲ್ಲಿಸುತ್ತೇನೆ ಎನ್ನುತ್ತಾರೆ.
ನೀವೊಬ್ಬರೇ ರಾಜೀನಾಮೆ ಕೊಡುವಿರೋ? ಇಲ್ಲವೇ ನಿಮ್ಮ ಜೊತೆ ಯಾರಾದರೂ ಬರುತ್ತಾರ ಎಂಬ ಪ್ರಶ್ನೆಗೆ ನಂಬರ್ ಹೇಳಲು ಸಾಧ್ಯವಿಲ್ಲ. ಮುಂದಿನ ವಾರಕ್ಕೆ ಎಲ್ಲವೂ ಸರಿಹೋಗುತ್ತದೆ ಕಾದು ನೋಡಿ ಎಂದು ಹೇಳಿ ದೂರವಾಣಿ ಕರೆಯನ್ನು ಕಡಿತಗೊಳಿಸಿದರು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾದ ಮೇಲೆ ಆಡಳಿತ ಪಕ್ಷದಲ್ಲಿದ್ದರೂ ರಮೇಶ್ ಜಾರಕಿಹೊಳಿ ಒಂದು ರೀತಿ ವಿರೋಧ ಪಕ್ಷದ ನಾಯಕರ ಸ್ಥಾನವನ್ನು ನಿಭಾಯಿಸಿದ್ದರು.
ಬೆಳಗಾವಿ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದರು.
ಆದ್ದರಿಂದಲೇ ಕಳೆದ ಐದರಿಂದ ಆರು ಬಾರಿ ಸಚಿವ ಸಂಪುಟ ಸಭೆಗೆ ಹೋಗಿರಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿದರು ಎಂಬಂತೆ ಮೊದಲೆ ಅಸಮಾಧಾನಗೊಂಡಿದ್ದ ರಮೇಶ್ ಜಾರಕಿಹೊಳಿಯನ್ನು ನಿನ್ನೆಯಷ್ಟೇ ಸಂಪುಟದಿಂದ ಕೈ ಬಿಡಲಾಗಿತ್ತು.
ಅವರ ಬದಲಿಗೆ ಸಹೋದರ ಸತೀಶ್ ಜಾರಕಿಹೊಳಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ರಯತ್ನವನ್ನು ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನಡೆಸಿದರು.
ಸಿದ್ದರಾಮಯ್ಯ ಹೇಳಿದರೆ ರಮೇಶ್ ಜಾರಕಿಹೊಳಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ನಂಬಿಕೆ ಕಾಂಗ್ರೆಸ್ ವಲಯದಲ್ಲಿತ್ತು.ಆದರೆ ಇದೀಗ ಅವರ ನಿರ್ಧಾರ ಕಾಂಗ್ರೆಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈಗಾಗಲೇ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ರಮೇಶ್ ಜಾರಕಿಹೊಳಿ ಹಾದಿಯನ್ನೇ ಹಿಡಿದರೆ ಗತಿಯೇನು ಎಂಬ ಚಿಂತೆ ಕಾಂಗ್ರೆಸ್‍ಗೆ ಎದುರಾಗಿದೆ.