ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪ ಮಾಡಿದ ಶಾಸಕ ಸುಧಾಕರ್

ಬೆಂಗಳೂರು, ಡಿ.23- ಸಂಪುಟ ವಿಸ್ತರಣೆ ವೇಳೆ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಶಾಸಕ ಸುಧಾಕರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಡಿ.ಕೆ.ಶಿವಕುಮಾರ್, ಕೃಷ್ಣಭೆರೇಗೌಡ ಮಾತ್ರ ಒಕ್ಕಲಿಗ ಸಮುದಾಯದಿಂದ ಸಚಿವರಾಗಿದ್ದಾರೆ.ಇನ್ನೂ ಒಂದು ಸ್ಥಾನ ಒಕ್ಕಲಿಗರಿಗೆ ನೀಡಬೇಕಿತ್ತು.ನನಗೇ ಕೊಡಬೇಕು ಎಂದೇನೂ ಇಲ್ಲ, ಎಸ್.ಟಿ.ಸೋಮಶೇಖರ್, ಎಂ.ಕೃಷ್ಣಪ್ಪರಂತಹ ಹಿರಿಯ ನಾಯಕರಿದ್ದರು.ಒಕ್ಕಲಿಗರಿಗೆ ಪ್ರಾತಿನಿಧ್ಯ ಸಿಗದ ಬಗ್ಗೆ ಡಿ.ಕೆ.ಶಿವಕುಮಾರ್ ಕೂಡ ಮಾತನಾಡದೆ ಮೌನ ವಹಿಸಿದ್ದಾರೆ ಎಂದು ಹೇಳಿದರು.

ಜೆಡಿಎಸ್‍ನಲ್ಲಿ ಒಕ್ಕಲಿಗ ಸಚಿವರಿದ್ದಾರೆ ಎಂದು ಹೇಳುತ್ತಾರೆ.ಆದರೆ ಕಾಂಗ್ರೆಸ್‍ನಲ್ಲಿ ಹೆಚ್ಚು ಒಕ್ಕಲಿಗ ಶಾಸಕರಿದ್ದಾರೆ.ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ. ಇದರ ಬಗ್ಗೆ ಸಮುದಾಯದ ಶಾಸಕರೆಲ್ಲ ಸೇರಿ ಸಭೆ ನಡೆಸುವುದಾಗಿ ಹೇಳಿದ್ದಾರೆ.

ಸಂಪುಟ ವಿಸ್ತರಣೆಯಲ್ಲಿ ಸಮತೋಲನವಿಲ್ಲ. ಒಂದು ಜಿಲ್ಲೆಗೆ ಮೂರು ಸಚಿವ ಸ್ಥಾನ , ಕೆಲವು ಜಿಲ್ಲೆಗೆ ಯಾವ ಸ್ಥಾನವೂ ಇಲ್ಲ ಎಂದು ಶಾಸಕ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅದರ ಬದಲು ಹಾವೇರಿ, ದಾವಣಗೆರೆಗೆ ಸ್ಥಾನ ಕೊಡಬಹುದಿತ್ತು ಎಂದು ಪರೋಕ್ಷವಾಗಿ ಬಿ.ಸಿ.ಪಾಟೀಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಅಸಮಾಧಾನವಾಗಿರುವುದು ನಿಜ. ಹಾಗಂತ ನಾನು ಬಿಜೆಪಿಗೆ ಹೋಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಆದ ಅನ್ಯಾಯದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ರಮೇಶ್ ಜಾರಕಿ ಹೊಳಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಸರಿಯಲ್ಲ. ಆರೇ ತಿಂಗಳಿಗೇ ಅವರನ್ನು ಇಳಿಸಿರುವ ಕ್ರಮ ಸಮಂಜಸವಲ್ಲ. ಅದೇ ರೀತಿ ಶಂಕರ್ ಅವರನ್ನೂ ಸಚಿವ ಸ್ಥಾನದಿಂದ ತೆಗೆಯಬಾರದಿತ್ತು. ಶಂಕರ್ ಮತ್ತು ನಾಗೇಶ್ ಇಬ್ಬರೂ ಪಕ್ಷೇತರ ಶಾಸಕರು.ಈ ಇಬ್ಬರಿಗೂ ಮೊದಲು ನಿಗಮ ಮಂಡಳಿ ಸ್ಥಾನ ನೀಡಬೇಕಿತ್ತು.ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರ ಸಂಖ್ಯೆ ಸಾಕಷ್ಟಿತ್ತು ಎಂದು ಹೇಳಿದರು.

ಅತೃಪ್ತ ಶಾಸಕರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂಬ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿರುವ ಸುಧಾಕರ್, ಮಾಜಿ ಮುಖ್ಯಮಂತ್ರಿಯಾದವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ಅತೃಪ್ತರನ್ನು ಸಂಪರ್ಕಿಸಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂಬ ಯಡಿಯೂರಪ್ಪನವರ ಹೇಳಿಕೆ ಸಮಂಜಸವಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ