ಬೆಂಗಳೂರು,ಡಿ.23- ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಶಾಸಕ ರಾಮಲಿಂಗಾರೆಡ್ಡಿ ಪಕ್ಷದ ಇಬ್ಬರು ಪ್ರಭಾವಿ ಮುಖಂಡರಿಂದ ತಮಗೆ ಸಚಿವ ಸ್ಥಾನ ತಪ್ಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ನಾನು ಸಾಕಷ್ಟು ದುಡಿದಿದ್ದೇನೆ. ಕಳೆದ 40 ವರ್ಷಗಳಿಂದಲು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನಂತಹ ಪಕ್ಷ ನಿಷ್ಠರಿಗೆ ಸಚಿವ ಸ್ಥಾನ ತಪ್ಪಿಸಿದ್ದು ಬೇಸರ ತರಿಸಿದೆ ಎಂದರು.
ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವಾಗ ಅನುಸರಿಸಿದ ಮಾನದಂಡ ಸರಿಯಿಲ್ಲ. ವಿಜಯಪುರದ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ.ಒಂದೇ ಜಿಲ್ಲೆಗೆ ಮೂರು ಸಚಿವ ಸ್ಥಾನಗಳ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.
ಪಕ್ಷ ನಿಷ್ಠರ ಅಸಮಾಧಾನಕ್ಕೆ ಬೆಲೆ ಇಲ್ಲ. ಪಕ್ಷ ವಿರೋಧಿಗಳಿಗೆ ಸಚಿವ ಸ್ಥಾನ ನೀಡುತ್ತಾರೆ. ನಾನು ಎಂದಿಗೂ ಬ್ಲಾಕ್ ಮೇಲ್ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ನನ್ನನ್ನು ಇಬ್ಬರು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.