ಬೆಂಗಳೂರು, ಡಿ.23- ಮಧ್ಯವರ್ತಿಗಳಿಗೆ ಲಾಭ ಮಾಡಿಕೊಳ್ಳುತ್ತಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಿ, ರೈತರಿಗೂ ಲಾಭವಾಗಬೇಕು, ಗ್ರಾಹಕರಿಗೂ ಹೊರೆಯಾಗಬಾರದು ಅಂತಹ ಹೊಸ ವ್ಯವಸ್ಥೆಯನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನ್ಯಾಷನಲ್ ಕಾಲೇಜು, ಸ್ವಾಯತ್ತ ಕಾಲೇಜಿನ 7ನೆ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು,ರಾಜ್ಯದ ರೈತರು 24 ಸಾವಿರ ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಾರೆ.ಅದು ಮಾರುಕಟ್ಟೆ ಮೂಲಕ ಗ್ರಾಹಕರು 54 ಸಾವಿರ ಕೋಟಿ ರೂ.ಖರ್ಚು ಮಾಡಿ ಖರೀದಿಸುವಷ್ಟಾಗಿರುತ್ತದೆ.ಈ ನಡುವಿನ ಸಾವಿರಾರು ಕೋಟಿ ರೂ.ಗಳು ಮಧ್ಯವರ್ತಿಗಳ ಪಾಲಾಗುವುದಕ್ಕೆ ಕಡಿವಾಣ ಹಾಕಲು ಮುಂದಿನ ಬಜೆಟ್ನಲ್ಲಿ ಸೂಕ್ತ ಯೋಜನೆ ತರುವುದಾಗಿ ತಿಳಿಸಿದರು.
ಇತಿಹಾಸಕಾರರು ಬರೆದಿಡುವಂತಹ ಕೆಲಸವನ್ನು ಮಾಡುತ್ತೇನೆ. ಹಣಕ್ಕಾಗಿ ಕೆಲಸ ಮಾಡುವುದಿಲ್ಲ. ಬಡವರಿಗಾಗಿ ಕೆಲಸ ಮಾಡುತ್ತೇನೆ.ನಾನು ಮುಖ್ಯಮಂತ್ರಿಯಾಗಿರುವುದು ದೇವರು ಅವಕಾಶ ಮಾಡಿಕೊಟ್ಟಿದ್ದರಿಂದ ಎಂದು ನುಡಿದರು.
ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಹೇಳದೆ ಜನರಿಗೆ ಮೋಸ ಮಾಡಿದವರಿಂದ ದುಡ್ಡು ವಾಪಸ್ ಕೊಡಿಸಲು ಹೋದೆ.ಅದು ಸಾಧ್ಯವಾಗಲಿಲ್ಲ. ಶ್ರೀಮಂತರ ಪರವಾಗಿ ಕಾನೂನು ಇದೆ ಎಂದ ಅವರು, ರೈತರ ಸಾಲ ಮನ್ನಾದಿಂದ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲ. ಆದರೆ ಕೋಟ್ಯಂತರ ರೂ.ಸಾಲ ಮಾಡಿದ ಶ್ರೀಮಂತರು ಬ್ಯಾಂಕ್ಗೆ ವಂಚನೆ ಮಾಡುತ್ತಿದ್ದಾರೆ.ಅವರಿಗೆ ಎನ್ಪಿಎ ಹೆಸರಿನಲ್ಲಿ ಸಾಲ ಮನ್ನಾ ಮಾಡುತ್ತಿರುವುದರಿಂದ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯದಲ್ಲಿ ರೈತರ ಸಾಲ ಮನ್ನಾವನ್ನು ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿಯೇ ಆ ಚೌಕಟ್ಟಿನೊಳಗೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿರುವ ಬರಪೀಡಿತ ಜಿಲ್ಲೆ, ತಾಲೂಕುಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚು ಗಮನಹರಿಸಬೇಕು. ಆಗ ರೈತರ ಸಂಕಷ್ಟಗಳು ದೂರಾಗಲಿವೆ ಎಂದರು.
ನಾನೂ ಕೂಡ ನ್ಯಾಷನಲ್ ಕಾಲೇಜು ವಿದ್ಯಾರ್ಥಿ.ಕಾಲೇಜಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ಆವಶ್ಯಕತೆ ಇರುವ ಇಂಗ್ಲಿಷ್ ಭಾಷೆಯ ಪರಿಣಿತಿ ನಮ್ಮ ವಿಶ್ವವಿದ್ಯಾಲಯಗಳಲ್ಲೂ ದೊರೆಯುವಂತಾಗಬೇಕು.ನಮ್ಮ ಪದವೀಧರರಿಗೆ ಅಗತ್ಯವಿರುವುದು ಜೀವನ ಕಲೆಯಲ್ಲಿ ಪರಿಣಿತಿ, ಸ್ವ ಉದ್ಯೋಗ ಮಾಡಲು ಬೇಕಿರುವ, ಕೌಶಲ್ಯ ರೂಢಿಸಿಕೊಳ್ಳುವ ಅಗತ್ಯ, ಇಂಗ್ಲಿಷ್ ಭಾಷೆಯ ಪರಿಣಿತಿ ನಮ್ಮ ವಿಶ್ವವಿದ್ಯಾಲಯಗಳಲ್ಲಿ ದೊರಕುವಂತಾಗಬೇಕು.ಇದು ನಾನು ಕಂಡುಕೊಂಡಿರುವ ವಿಷಯ ಎಂದು ಹೇಳಿದರು.
ರಾಜ್ಯ ಉನ್ನತ ಶಿಕ್ಷಣ ವ್ಯವಸ್ಥೆ ಅತ್ಯಂತ ಗುಣಮಟ್ಟದ್ದಾಗಿರಬೇಕು ಎಂಬುದು ನನ್ನ ಅಭಿಲಾಷೆ. ಈ ನಿಟ್ಟಿನಲ್ಲಿ ಇತ್ತೀಚೆಗೆ 67 ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿದರು.
ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು.ಅದರಂತೆಯೇ ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಂತಾಗಬೇಕು.ಆಗ ಮಾತ್ರ ನಮ್ಮ ದೇಶದ ಅತಿ ದೊಡ್ಡ ಸಂಪನ್ಮೂಲವಾದ ಯುವಜನತೆಯ ಸದ್ಬಳಕೆ ಸಾಧ್ಯವಾಗುತ್ತದೆ.ಮೂಲ ವಿಜ್ಞಾನ ಹಾಗೂ ಬಿಎ ಪದವಿಯಲ್ಲಿ ವ್ಯಾಸಂಗ ಮಾಡುವ ಅಭ್ಯರ್ಥಿಗಳ ಸಂಖ್ಯೆ ಪ್ರತಿವರ್ಷ ಕಡಿಮೆಯಾಗುತ್ತಿದೆ.
ಈ ವಿಷಯಗಳ ಬಗ್ಗೆ ಶಿಕ್ಷಣ ತಜ್ಞರ ಜತೆ ಚರ್ಚಿಸಿ ಪಠ್ಯಕ್ರಮಗಳಲ್ಲಿ ಕೌಶಲ್ಯಾಭಿವೃದ್ಧಿ ವಿಷಯಗಳನ್ನು ಅಳವಡಿಸಿ ಗುಣಮಟ್ಟದ ಉದ್ಯೋಗಾಧಾರಿತ ಶಿಕ್ಷಣ ನೀಡುವ ಮೂಲಕ ಮೂಲ ವಿಜ್ಞಾನದ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕೆಲಸ ಆಗಬೇಕಿದೆ.ನಮ್ಮ ಸರ್ಕಾರ ಈ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ನೆಚ್ಚಿನ ಗುರುಗಳಾದ ಡಾ.ಹೆಚ್ಎನ್ ಸ್ಮರಣಾರ್ಥ ಅವರ ಹುಟ್ಟೂರು ಗೌರಿಬಿದನೂರು ತಾಲೂಕು ಹೊಸೂರು ಗ್ರಾಮದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸಲು ಭಾರತ ವಿಜ್ಞಾನ ಸಂಸ್ಥೆಯ ಕೆ.ಪಿ.ಜೆ.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದರು.
ಪದವೀಧರರಾದ ಮಾತ್ರಕ್ಕೆ ಓದು ಮುಗಿಯಿತು ಎಂದಲ್ಲ, ಬದುಕಿನಲ್ಲಿ ಉನ್ನತಿ ಸಾಧಿಸಿ ದೇಶದ, ಸಮಾಜದ ಬೆಳವಣಿಗೆ ನಿಮ್ಮ ಸುತ್ತಮುತ್ತಲಿನ ಜನರಿಗಾಗಿ ಸಾಧ್ಯವಾದ ಕೊಡುಗೆ ನೀಡಿ ಎಂದು ಪದವೀದರರಿಗೆ ಕರೆ ನೀಡಿದರು.
ಹೆಚ್.ನರಸಿಂಹಯ್ಯ ಅವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆ ದೊಡ್ಡ ಆಲದಮರವಾಗಿ ಬೆಳೆದು ನಿಂತಿದೆ. ಡಾ.ಹೆಚ್ಎನ್ ಅವರೇ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಯಾವುದೇ ವಿಷಯವನ್ನು ಪರಾಮರ್ಶಿಸದೆ ಒಪ್ಪಿಕೊಳ್ಳಬೇಡಿ ಎಂದು ಅವರು ಸಲಹೆ ಮಾಡುತ್ತಿದ್ದರು.ಸರಳ ಬದುಕು, ಉನ್ನತ ವಿಚಾರ ಎಂಬ ತತ್ತ್ವಕ್ಕೆ ಬದ್ಧರಾಗಿ ಬಾಳಿದರು.ಅವರ ಇನ್ನೊಂದು ಸಂಸ್ಥೆಯಾದ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಶಿಕ್ಷಣ ಮಾತ್ರ ನಮ್ಮನ್ನು ಒಳ್ಳೆಯವರನ್ನಾಗಿ ಮಾಡಲು ಸಾಧ್ಯ.ಶಿಕ್ಷಣಕ್ಕೆ ಪರ್ಯಾಯವಾಗಿ ಯಾವುದೂ ಇಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು, ತಂತ್ರಜ್ಞಾನ ಕಲಿಯುವುದರ ಜತೆಗೆ ಮಾನವೀಯವಾಗಿ ವರ್ತಿಸುವುದು ಇಂದಿನ ಅಗತ್ಯ.ಯುವ ಜನಾಂಗ ವಿದ್ಯೆಗೋಸ್ಕರ ತುಡಿಯುತ್ತಿರುವುದನ್ನು ಕಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹತ್ತು-ಹಲವು ಯೋಜನೆಗಳನ್ನು ರೂಪಿಸಿದೆ.ಗ್ರಾಮೀಣ ವಿದ್ಯಾರ್ಥಿಗಳಿಗೆ ಹೋಲಿಸಿದರೆ ನಗರ ವಿದ್ಯಾರ್ಥಿಗಳಿಗೆ ಅನುಕೂಲಗಳು ಹೆಚ್ಚು. ವಿದ್ಯೆ ನಮಗೆ ಉದ್ಯೋಗಾವಕಾಶಗಳಿಗೆ ಹೆಬ್ಬಾಗಿಲಿದ್ದಂತೆ. ಇತ್ತೀಚಿನ ಅಂಕಿ-ಅಂಶಗಳನ್ನು ಗಮನಿಸಿದರೆ ನಮ್ಮ ವಿವಿಗಳ ಎಂಪ್ಲಾಯ್ಮೆಂಟ್ರೇಷಿಯೋ ಶೇ.10ಕ್ಕಿಂತಲೂ ಕಡಿಮೆ ಎಂಬುದು ಅತ್ಯಂತ ಕಳವಳಕಾರಿ ಎಂದರು.
ಕಾಲೇಜು, ವಿವಿಗಳಿಂದ ಪದವಿ ಪಡೆದ 100ಕ್ಕೆ 10 ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ. ವಿವಿಧ ವಲಯಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿದೆ. ಆದರೆ, ಅದಕ್ಕೆ ತಕ್ಕ ಕೌಶಲ್ಯ ಅಭ್ಯರ್ಥಿಗಳಲ್ಲಿರುವುದಿಲ್ಲ ಎಂಬುದು ಉದ್ಯಮಿಗಳ ಅಭಿಮತ.ಈ ಅಂತರ ನಿವಾರಿಸಲು ನಮ್ಮ ಸರ್ಕಾರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯನ್ನು ಸ್ಥಾಪಿಸಿದೆ.ಇಂತಹ ಉಪಕ್ರಮಗಳನ್ನು ನ್ಯಾಷನಲ್ ಕಾಲೇಜು ಕೂಡ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಇಸ್ರೋ ಮಾಜಿ ಅಧ್ಯಕ್ಷ ಡಾ.ಎಸ್.ಕಿರಣ್ಕುಮಾರ್, ಚಿತ್ರನಟ ವಿಷ್ಣುವರ್ಧನ್, ಕ್ರಿಕೆಟ್ ಪಟು ಅನಿಲ್ಕುಂಬ್ಳೆ, ಬಿ.ಎಸ್.ಚಂದ್ರಶೇಖರ್, ಪ್ರಸನ್ನ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು.
ಮೈಕ್ರೋಸಾಫ್ಟ್, ಐಬಿಎಂ, ಗೂಗಲ್, ಆ್ಯಪಲ್, ಇಂಟೆಲ್, ಟಿಸಿಎಸ್, ಇನ್ಫೋಸಿಸ್, ವಿಪೆÇ್ರೀ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿರುವುದು ಈ ಸಂಸ್ಥೆಯ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.