ಬೆಂಗಳೂರು,ಡಿ.22- ಅಪ್ಪಂದಿರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಪುತ್ರಿಯರು ಗರಂ ಆಗಿದ್ದಾರೆ. ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಹಿರೇಕೆರೂರು ಶಾಸಕ ಬಿ.ಎಸ್.ಪಾಟೀಲ್ ಪುತ್ರಿಯರು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ನನ್ನ ತಂದೆ ಎರಡು ಬಾರಿ ಡಿಸಿಸಿ ಅಧ್ಯಕ್ಷರಾಗಿದ್ದವರು. 7 ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಪಕ್ಷಕ್ಕಾಗಿ ಬಹಳ ದುಡಿದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಬೇಸರ ತಂದಿದೆ. ಈ ಕ್ರಮ ಪಕ್ಷ ನಿಷ್ಠರಿಗೆ ಹಿಂದೇಟಾಗಿದೆ ಎಂದು ರಾಮಲಿಂಗಾರೆಡ್ಡಿಯವರ ಪುತ್ರಿ ಶಾಸಕಿ ಸೌಮ್ಯಾರೆಡ್ಡಿ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಯಾವ ಸಂಸದೀಯ ಕಾರ್ಯದರ್ಶಿ ಹುದ್ದೆಯೂ ಬೇಡ. ಇದೇ ಮೊದಲ ಬಾರಿಗೆ ಜಯನಗರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದೇವೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುವುದಿದೆ. ಅಲ್ಲಿಗೆ ನನ್ನ ಸಮಯ ಸಾಕಾಗುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷ ಟಾಂಗ್ ನೀಡಿದ್ದಾರೆ.
ಇನ್ನು, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಕೂಡಾ ಟ್ವೀಟರ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಬಿ.ಸಿ.ಪಾಟೀಲ್ಗೆ ಈ ಬಾರಿ ಸಚಿವ ಸ್ಥಾನ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಕಡೇ ಗಳಿಗೆಯಲ್ಲಿ ಎಂ.ಬಿ.ಪಾಟೀಲ್ಗೆ ಸಚಿವ ಸ್ಥಾನ ಸಿಗುವ ಮೂಲಕ ಬಿ.ಸಿ.ಪಾಟೀಲ್ಗೆ ಮತ್ತೊಮ್ಮೆ ಸಚಿವ ಸ್ಥಾನ ಕೈ ತಪ್ಪಿದೆ.
ಕಾಂಗ್ರೆಸ್ ಹೈಕಮಾಂಡ್ನ ಈ ಕ್ರಮದಿಂದ ನನ್ನ ತಂದೆಗೆ ಅನ್ಯಾಯವಾಗಿದೆ. ಹಿರೇಕೆರೂರು-ರಟ್ಟೇಹಳ್ಳಿ ತಾಲೂಕಿನ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಠಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ನಿಷ್ಠೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಹಾವೇರಿ ಜಿಲ್ಲೆಯ ಏಕೈಕ ನಾಯಕರೆನಿಸಿದ್ದಾರೆ. ಕಳೆದ 38 ವರ್ಷಗಳಿಂದ ಹಿರೇಕೆರೂರಿಗೆ ಒಂದೇ ಒಂದು ಸಚಿವ ಸ್ಥಾನವೂ ಸಿಕ್ಕಿಲ್ಲ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ನಲ್ಲಿ ಸಚಿವ ನೀಡಲು ನೀಡಲು ಯಾವ ಮಾನದಂಡ ಅನುಸರಿಸಲಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಪಕ್ಷದೊಳಗೆ ಸ್ವಾರ್ಥಕ್ಕಾಗಿ ಏನೆಲ್ಲಾ ನಡೆಯುತ್ತದೆ. ಕಾಂಗ್ರೆಸ್ನ ಈ ಅನ್ಯಾಯಕ್ಕೆ ತಾಲೂಕಿನ ಜನತೆಯೇ ಉತ್ತರ ಹೇಳಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.